ಆನ್ ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ 9ನೇ ಮಹಡಿಯಿಂದ ಜಿಗಿದ ಮೂವರು ಮಕ್ಕಳು!
ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ನ ಭಾರತ್ ಸಿಟಿಯಲ್ಲಿ ಎದೆಯೊಣಗಿಸುವ ಘಟನೆಯೊಂದು ನಡೆದಿದೆ. ಆನ್ ಲೈನ್ ಗೇಮ್ ಗಳ ಚಟಕ್ಕೆ ಬಿದ್ದಿದ್ದ ಮೂವರು ಅಪ್ರಾಪ್ತ ಸಹೋದರಿಯರು, ಪೋಷಕರು ಗೇಮ್ ಆಡದಂತೆ ತಡೆದ ಹಿನ್ನೆಲೆಯಲ್ಲಿ ಕಟ್ಟಡದ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ವಿವರ: ಪೊಲೀಸರ ಮಾಹಿತಿ ಪ್ರಕಾರ, ಮೃತಪಟ್ಟ ಸಹೋದರಿಯರು 12, 14 ಮತ್ತು 16 ವರ್ಷ ವಯಸ್ಸಿನವರಾಗಿದ್ದಾರೆ. ಇವರು ದೀರ್ಘಕಾಲದಿಂದ ಆನ್‌ಲೈನ್ ಗೇಮ್‌ಗಳಿಗೆ ತೀವ್ರವಾಗಿ ವ್ಯಸನಿಯಾಗಿದ್ದರು. ಮಕ್ಕಳ ಈ ಗೇಮಿಂಗ್ ಹುಚ್ಚಿನಿಂದ ಬೇಸತ್ತಿದ್ದ ಪೋಷಕರು, ಪದೇ ಪದೇ ಅವರನ್ನು ಗೇಮ್ ಆಡದಂತೆ ಗದರಿಸುತ್ತಿದ್ದರು ಮತ್ತು ಮೊಬೈಲ್ ಬಳಸದಂತೆ ತಡೆದಿದ್ದರು.
ಪೋಷಕರ ಈ ವಿರೋಧದಿಂದ ಮನನೊಂದ ಸಹೋದರಿಯರು, ತಾವು ವಾಸವಿದ್ದ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಒಟ್ಟಾಗಿ ಜಿಗಿದಿದ್ದಾರೆ. ಘಟನೆಯ ತೀವ್ರತೆಗೆ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದೊಂದು ಪ್ರಾಥಮಿಕವಾಗಿ ಆತ್ಮಹತ್ಯೆ ಪ್ರಕರಣ ಎಂದು ಕಂಡುಬಂದಿದ್ದು, ಹೆಚ್ಚಿನ ವಿವರಗಳಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಭಾರತ್ ಸಿಟಿ ಎಂಬ ವಸತಿ ಸಂಕೀರ್ಣದಲ್ಲಿ ಈ ದಾರುಣ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮತ್ತು ವಿಷಾದ ಮೂಡಿಸಿದೆ.
ಆನ್‌ಲೈನ್ ಗೇಮಿಂಗ್ ಚಟವು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಎಂತಹ ಗಂಭೀರ ಪರಿಣಾಮ ಬೀರಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























