ಕಾಫಿ, ಟೀ ಪ್ರಿಯರಿಗೆ ಬೆಲೆ ಏರಿಕೆ ಬಿಸಿ: ಇಂದು ಬೆಳಗ್ಗಿನಿಂದಲೇ ದರ ಏರಿಕೆ!
ಬೆಂಗಳೂರು: ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಶೀತಲ ವಾತಾವರಣದಲ್ಲಿ ಬಿಸಿ ಬಿಸಿ ಕಾಫಿ ಅಥವಾ ಟೀ ಹೀರುತ್ತಾ ದಿನ ಆರಂಭಿಸುತ್ತಿದ್ದ ರಾಜ್ಯದ ಕಾಫಿ–ಟೀ ಪ್ರಿಯರಿಗೆ ಇಂದಿನಿಂದ (ನವೆಂಬರ್ 2) ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಕರ್ನಾಟಕ ಸರ್ಕಾರವು ಕೆಎಂಎಫ್ (KMF) ನಂದಿನಿ ಹಾಲಿನ ದರವನ್ನು ಲೀಟರ್ ಗೆ ₹8 ರಿಂದ ₹12 ರವರೆಗೆ ಏರಿಕೆ ಮಾಡಿದ ಬೆನ್ನಲ್ಲೇ, ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಕಾಫಿ ಮತ್ತು ಟೀ ಬೆಲೆಯನ್ನು ಏಕಾಏಕಿ ₹5 ರಷ್ಟು ಹೆಚ್ಚಿಸಲಾಗಿದೆ.
ಹೊಸ ದರದ ಪಟ್ಟಿ:
ಮಿನಿ ಕಾಫಿ / ಟೀ: ₹15 ಇದ್ದ ದರ ಈಗ ₹20 ಕ್ಕೆ ಏರಿಕೆಯಾಗಿದೆ.
ಫುಲ್ ಕಾಫಿ / ಟೀ: ₹20 ಇದ್ದ ಬೆಲೆ ಈಗ ₹25 ಕ್ಕೆ ತಲುಪಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇರುವ ಪ್ರಮುಖ ಹೋಟೆಲ್ ಹಾಗೂ ಉಪಹಾರ ಮಂದಿರಗಳಲ್ಲಿ ಈ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.
ಬೆಲೆ ಏರಿಕೆಗೆ ಕಾರಣವೇನು?
ಸರ್ಕಾರವು ನಂದಿನಿ ಹಾಲಿನ ದರವನ್ನು ಲೀಟರ್ಗೆ ₹8 ರಿಂದ ₹12 ರಷ್ಟು ಹೆಚ್ಚಳ ಮಾಡಿದ್ದೇ ಈ ಏರಿಕೆಗೆ ಮುಖ್ಯ ಕಾರಣ. ಹಾಲಿನ ದರ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಾದಾಗ ಹೋಟೆಲ್ ಉದ್ಯಮವನ್ನು ನಷ್ಟದಿಂದ ಉಳಿಸಿಕೊಳ್ಳಲು ಕಾಫಿ-ಟೀ ಬೆಲೆ ಹೆಚ್ಚಿಸುವುದು ಅನಿವಾರ್ಯ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿತ್ತು. ಅದರಂತೆ, ಇಂದು ಬೆಳಿಗ್ಗೆಯಿಂದಲೇ ಹೆಚ್ಚಿಸಿದ ನೂತನ ದರಗಳು ಅಸ್ತಿತ್ವಕ್ಕೆ ಬಂದಿವೆ.
ದಿಢೀರ್ ಬೆಲೆ ಏರಿಕೆಯಿಂದಾಗಿ ಕಚೇರಿಗೆ ತೆರಳುವ ಉದ್ಯೋಗಿಗಳು, ಕಾರ್ಮಿಕರು ಹಾಗೂ ಸಾಮಾನ್ಯ ಸಾರ್ವಜನಿಕರು ಹೋಟೆಲ್ ಗಳಲ್ಲಿ ದಿನನಿತ್ಯ ಕಾಫಿ–ಟೀ ಕುಡಿಯುವುದಕ್ಕೂ ಯೋಚಿಸುವಂತಾಗಿದೆ.



























