ಪೈಶಾಚಿಕ: ರಾಜಸ್ಥಾನದ ದೌಸಾದಲ್ಲಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಂಧನ - Mahanayaka
7:29 AM Wednesday 20 - August 2025

ಪೈಶಾಚಿಕ: ರಾಜಸ್ಥಾನದ ದೌಸಾದಲ್ಲಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಂಧನ

11/11/2023


Provided by

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ.ಜಿಲ್ಲೆಯ ಲಾಲ್ಸೊಟ್ ಪ್ರದೇಶದಿಂದ ಈ ಘಟನೆ ವರದಿಯಾಗಿದ್ದು, ಆರೋಪಿ ಸಬ್ ಇನ್ಸ್‌ಪೆಕ್ಟರ್ ಭೂಪೇಂದ್ರ ಸಿಂಗ್, ಅಪ್ರಾಪ್ತ ಬಾಲಕಿಯನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಎಎಸ್ಪಿ ರಾಮಚಂದ್ರ ಸಿಂಗ್ ನೆಹ್ರಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಈ ವಿಷಯ ತಿಳಿದ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಹುವಾಸ್ ಪೊಲೀಸ್ ಠಾಣೆಗೆ ಘೇರಾವ್ ಹಾಕಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆರೋಪಿ ಸಬ್ ಇನ್ಸ್ ಪೆಕ್ಟರ್ ಅವರನ್ನು ಅಧಿಕೃತವಾಗಿ ಪೊಲೀಸರಿಗೆ ಹಸ್ತಾಂತರಿಸುವ ಮೊದಲು ಅವರು ಥಳಿಸಿದ್ದಾರೆ.

ಇದೇ ವೇಳೆ ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಕೂಡ ಸ್ಥಳಕ್ಕೆ ತಲುಪಿ, “ಲಾಲ್ಸೊಟ್ಸ್ ನಲ್ಲಿ ದಲಿತ ಬಾಲಕಿಯ ಮೇಲೆ ಪೊಲೀಸ್ ಪೇದೆಯೊಬ್ಬ ಅತ್ಯಾಚಾರ ಎಸಗಿದ ಘಟನೆಯ ಬಗ್ಗೆ ಜನರಲ್ಲಿ ಭಾರಿ ಆಕ್ರೋಶವಿದೆ. ಮುಗ್ಧ ಮಗುವಿಗೆ ನ್ಯಾಯ ಪಡೆಯಲು ನಾನು ಸ್ಥಳಕ್ಕೆ ತಲುಪಿದ್ದೇನೆ” ಎಂದಿದ್ದಾರೆ.

ಅಶೋಕ್ ಗೆಹ್ಲೋಟ್ ಸರ್ಕಾರದ ಅಸಮರ್ಥತೆಯಿಂದಾಗಿ ನಿರಂಕುಶವಾಗಿರುವ ಪೊಲೀಸರು, ಚುನಾವಣೆಯಂತಹ ಸೂಕ್ಷ್ಮ ಸಂದರ್ಭದಲ್ಲೂ ದೌರ್ಜನ್ಯ ಎಸಗುವುದನ್ನು ನಿಲ್ಲಿಸುತ್ತಿಲ್ಲ” ಎಂದು ಅವರು ಆರೋಪಿಸಿದ್ದಾರೆ.

“ಆರೋಪಿ ಎಎಸ್ಐ ಭೂಪೇಂದ್ರ ಸಿಂಗ್ ಗಂಭೀ ಆರೋಪವನ್ನು ಎದುರಿಸುತ್ತಿದ್ದಾರೆ ಮತ್ತು ಅವರನ್ನು ಶೀಘ್ರದಲ್ಲೇ ಕೆಲಸದಿಂದ ವಜಾಗೊಳಿಸಲಾಗುವುದು. ಪೊಲೀಸರು, ಸಂತ್ರಸ್ತ ಕುಟುಂಬಕ್ಕೆ ಎಲ್ಲಾ ರೀತಿಯಲ್ಲಿ ಸಹಾಯವನ್ನು ಒದಗಿಸುತ್ತಾರೆ” ಎಂದು ಮೀನಾ ಹೇಳಿದರು. ಈ ಘಟನೆಯಲ್ಲಿ ಬದುಕುಳಿದವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಬಿಜೆಪಿ ಸಂಸದ ಹೇಳಿದರು.

ಇತ್ತೀಚಿನ ಸುದ್ದಿ