ಪತ್ನಿ ಹೊರ ಹೋದಾಗ 5 ವರ್ಷದ ಮಗಳ ಮೇಲೆ ಅತ್ಯಾಚಾರ: ಮಲತಂದೆಗೆ 20 ವರ್ಷ ಕಠಿಣ ಶಿಕ್ಷೆ

ಚಾಮರಾಜನಗರ: ಹೆಂಡತಿ ಹೊರ ಹೋದ ವೇಳೆ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ಚಾಮರಾಜನಗರದ ಮಕ್ಕಳ ಸ್ನೇಹಿ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಮೈಸೂರಿನ ಗೌಸಿಯ ನಗರದ ನಿವಾಸಿ ಸೈಯದ್ ಮುಜಾಮಿಲ್(45) ಶಿಕ್ಷೆಗೊಳಗಾದ ಅಪರಾಧಿ. ಈತ ಎರಡು ಮದುವೆಗಳನ್ನು ಆಗಿದ್ದು ಮೊದಲ ಹೆಂಡತಿ ದೂರವಾಗಿದ್ದು ಎರಡನೇ ಹೆಂಡತಿ ಮೃತಪಟ್ಟಿದ್ದಾಳೆ. ಮೂರನೇ ಹೆಂಡತಿಯಾಗಿ ಚಾಮರಾಜನಗರದ ಒಬ್ಬಾಕೆಯನ್ನು ಈತ ವಿವಾಹವಾಗಿದ್ದು ಆಕೆಗೆ ಮಕ್ಕಳಿದ್ದವು.
2022 ರ ಜನವರಿ 4 ರಂದು ಪತ್ನಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕುರಾನ್ ಪಠಿಸಲು ತೆರಳಿದ್ದ ವೇಳೆ 5 ವರ್ಷದ ಅಪ್ರಾಪ್ತೆ ಮೇಲೆ ಈತ ಅತ್ಯಾಚಾರ ಎಸಗಿದ್ದ, ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣವೂ ಕೂಡ ದಾಖಲಾಗಿತ್ತು.
ಸಾಕ್ಷಿದಾರರ ಹೇಳಿಕೆ, ವೈದ್ಯಕೀಯ ಪರೀಕ್ಷೆಗಳಿಂದ ಮುಜಾಮಿಲ್ ನ ಹೇಯಕೃತ್ಯ ಸಾಬೀತಾದ ಹಿನ್ನೆಲೆ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎ.ಸಿ.ನಿಶಾರಾಣಿ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ, ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ 6 ಲಕ್ಷ ರೂ.ವನ್ನು ಕಾನೂನು ಸೇವಾ ಪ್ರಾಧಿಕಾರವು 30 ದಿನದೊಳಗೆ ಕೊಡಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.