ಶಾಸಕರಿಗೆ 50 ಕೋಟಿ ಆಮಿಷ: ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ.ರವಿ ಕಿಡಿ - Mahanayaka

ಶಾಸಕರಿಗೆ 50 ಕೋಟಿ ಆಮಿಷ: ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ.ರವಿ ಕಿಡಿ

ct ravi
02/03/2024

ಚಿಕ್ಕಮಗಳೂರು:  ಸರ್ಕಾರವನ್ನ ಅಭದ್ರಗೊಳಿಸಲು ಬಿಜೆಪಿಯು ಒಬ್ಬ ಶಾಸಕನಿಗೆ 50 ಕೋಟಿ ರೂ. ಆಮಿಷವೊಡ್ಡಿದೆ ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಮಾಜಿ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು,  ಈ ರೀತಿಯ ಆಪಾದನೆ ಮಾಡುತ್ತಲೇ ಇರ್ತಾರೆ, ಇದು ಹುರುಳಿಲ್ಲದ ಆಪಾದನೆ.  ಸಿದ್ದುವಿನ ವೈ.ಎಸ್.ಟಿ. ಟ್ಯಾಕ್ಸ್, ಡಿಕೆಶಿಯ ಕನಕಪುರ ರಿಪಬ್ಲಿಕ್ ಟ್ಯಾಕ್ಸ್, ಈ ಟ್ಯಾಕ್ಸ್ ನಲ್ಲಿ ಶಾಸಕರಿಗೂ ಪಾಲು ಕೊಟ್ಟು ಚೆನ್ನಾಗಿ ಇಟ್ಟುಕೊಂಡಿದ್ದಾರೆ ಎಂದರು.

ನಮ್ಮ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಶಾಸಕರಿಗೂ ಪಾಲು ಬಂದಿದೆ. ತಾನು ಕಳ್ಳ ಪರರ ನಂಬ ಗಾದೆ ಇವರಿಗೆ ಅನ್ವಯವಾಗುತ್ತೆ, ಈ ಟ್ಯಾಕ್ಸ್ ಕಲೆಕ್ಟ್ ಮಾಡಿ ಯಾರ ಮೂಲಕ ಕೊಡ್ತಿದ್ದಾರೆ ಗೊತ್ತಿದೆ ಎಂದು ಅವರು ಹೇಳಿದರು.

ಇಂಟಲಿಜೆನ್ಸ್ ಎಡಿಜಿಪಿಯವರೇ,  ನೀವು ಭಯೋತ್ಪಾದಕರ ಹಿಂದೆ ಹೋಗಿ, ಸಿ.ಟಿ. ರವಿ ಹಿಂದೇ ಹೋದ್ರೆ ನಿನಗೆ ಏನೂ ಸಿಗಲ್ಲ. ಅವರು ಭಯೋತ್ಪಾದಕರ ಹಿಂದೆ ಹೋಗಿದ್ರೆ ಬಾಂಬ್ ಬ್ಲಾಸ್ಟ್ ತಡೆಯಬಹುದಿತ್ತು. ಅವರು ಯಾರದ್ದು, ಏನೂ ಸಿಗುತ್ತೆ ಅಂತ ರಾಜಕೀಯ ನಾಯಕರ ಹಿಂದೆ ಹೋಗಿದ್ದಾರೆ. ಸಿಎಂ‌ ಅಣತಿಯೋ ಯಾರದ್ದೋ ಗೊತ್ತಿಲ್ಲ, ಅವ್ರು ನಮ್ಮ ಹಿಂದೆ ಬಿದ್ದಿದ್ದಾರೆ ಎಂದು ಆರೋಪಿಸಿದರು.

ಜಾತಿ ಜಗಳ:

ಕಾಂಗ್ರೆಸ್ ರಾಜ್ಯದಲ್ಲಿ ಜಾತಿ ಜಗಳ ಹಚ್ಚುವ ಸಂಚು ನಡೆಸಿದೆ. ಒಂದು ಕಡೆ ಭಯೋತ್ಪಾದಕರ ಸಂಚು, ಮತ್ತೊಂದೆಡೆ ಕಾಂಗ್ರೆಸ್ ನದ್ದೇ ಸಂಚು.  ನಾನು ಎಲ್ಲವನ್ನೂ ಅಧ್ಯಯನ ಮಾಡಿಯೇ ಆರೋಪಿಸ್ತಿದ್ದೇನೆ.  ಕಾಂತರಾಜ್ ವರದಿಗೆ ಮೆಂಬರ್  ಸೆಕ್ರೇಟರಿಯೇ ಸಹಿ ಹಾಕಿಯೇ ಇಲ್ಲ, 2017ರಲ್ಲೇ ಕೊಟ್ಟಿದ್ದ ವರದಿ ವೈಜ್ಞಾನಿಕವಾಗಿಲ್ಲ ಪೂರ್ವಾಗ್ರಹ ಪೀಡಿತವಾಗಿತ್ತು.  ಆ ಹಿನ್ನೆಲೆಯಲ್ಲಿ ಮೆಂಬರ್ ಸೆಕ್ರೇಟರಿಯೇ ಸಹಿ ಹಾಕಿರಲಿಲ್ಲ. ಈಗ ಅದೇ ವರದಿಗೆ ತೇಪೆ ಹಾಕಿ ಜಯಪ್ರಕಾಶ್ ಹೆಗ್ಡೆ ವರದಿ ಸಲ್ಲಿಸಿದ್ದಾರೆ ಎಂದರು.

ವರದಿ ವಸ್ತುನಿಷ್ಠ, ವೈಜ್ಞಾನಿಕ, ಸಮಗ್ರ ಅಧ್ಯಯನದಿಂದ ಕೂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.  ಇವರದೇ ಪಕ್ಷದ ಸಚಿವರು, ಶಾಸಕರೇ ಆರೋಪಿಸ್ತಿದ್ದಾರೆ.  ದಲಿತರಿಗೆ, ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡುವ ಪ್ರಾಮಾಣಿಕ ಕಳಕಳಿ ಇಲ್ಲ.  ಅವರ ವರದಿ ಮಾಹಿತಿ ಸೋರಿಕೆಯಾಗಿದೆ. ಆ ಪ್ರಕಾರ ಎರಡನೇ ಸ್ಥಾನದಲಿ ಅಲ್ಪಸಂಖ್ಯಾತರಿದ್ದಾರೆ ಎನ್ನುತ್ತಿದ್ದಾರೆ. ಅಲ್ಪ ಸಂಖ್ಯಾತ ಎಂದರೆ ಮಾನದಂಡಗಳೇನು….?  ರಾಜ್ಯದ ಅತ್ಯಂತ ದೊಡ್ಡ ಸಮುದಾಯವನ್ನು ಅಲ್ಪಸಂಖ್ಯಾತರೆಂದು ಅವರಿಗೆ ಅಪಮಾನ ಮಾಡುತ್ತಿದ್ದೀರಿ.  ಅವರು ಅಲ್ಪ ಸಂಖ್ಯಾತರಲ್ಲ ಬಹು ಸಂಖ್ಯಾತರು. ಅಲ್ಪ ಸಂಖ್ಯಾತರು ಯಾರು ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.

ಬಹುಸಂಖ್ಯಾತರನ್ನ ಅಲ್ಪಸಂಖ್ಯಾತರನ್ನಾಗಿಟ್ಟು ವೋಟ್ ಬ್ಯಾಂಕ್ ಮಾಡುವುದು ನಿಮ್ಮ ನಿಲುವೋ..?  ಇದರಲ್ಲಿ ನಿಮ್ಮ‌ ನಿಲುವನ್ನು ಸ್ಪಷ್ಟಪಡಿಸಬೇಕು,  ಜನಸಂಖ್ಯೆಯಲ್ಲಿ ನಂ. 2ನೇ ಸ್ಥಾನದಲ್ಲಿರೋರನ್ನ ಅಲ್ಪಸಂಖ್ಯಾತರೆಂದು ಕರೆಯಬಾರದು. ಅಲ್ಪಸಂಖ್ಯಾತರ ಸ್ಥಾನ ಮಾನ ಸಿಗಬೇಕಾದವರಿಗೇ ಸಿಗಬೇಕು ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ