ದೇಶದಾದ್ಯಂತ 7.5 ಕೋಟಿ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ತೊಂದರೆ ಅನುಭವಿಸಿದ್ದಾರೆ: ರಾಹುಲ್ ಗಾಂಧಿ
ನವದೆಹಲಿ: ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ದಂಧೆಗೆ ಮುಕ್ತಿ ಹಾಡಲು ಮತ್ತು ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಭಾರತದ ಶಿಕ್ಷಣ ವ್ಯವಸ್ಥೆಯನ್ನು “ಮೊದಲಿನಿಂದ (from scratch) ಪುನರ್ನಿರ್ಮಿಸಬೇಕು” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶನಿವಾರ ಪ್ರತಿಪಾದಿಸಿದ್ದಾರೆ.
ಡೆಹ್ರಾಡೂನ್ ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ರ್ಯಾಲಿಯ ವಿಡಿಯೋವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ನೀಟ್-ಯುಜಿ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ರಿಯಾ ಕುಮಾರಿ ಅವರ ತಂದೆ ರಾಜೇಶ್ ಕುಮಾರ್ ಅವರನ್ನು ಭೇಟಿಯಾದ ಕ್ಷಣವನ್ನು ಸ್ಮರಿಸಿದ್ದಾರೆ.
“ಮಗಳ ಅಗಲಿಕೆಯಿಂದ ರಿಯಾ ತಂದೆ ರಾಜೇಶ್ ಜಿ ಸಂಪೂರ್ಣವಾಗಿ ಮುರಿದುಹೋಗಿದ್ದರು. ಅವರನ್ನು ನೋಡಿದ ಪ್ರತಿಯೊಬ್ಬರ ಕಣ್ಣಲ್ಲೂ ನೀರು ಬಂತು. ಇದು ಕೇವಲ ಒಂದು ಕುಟುಂಬದ ನೋವಲ್ಲ; ಪ್ರಶ್ನೆಪತ್ರಿಕೆ ಸೋರಿಕೆಯು ಇಂತಹ ಅನೇಕ ಕುಟುಂಬಗಳಿಂದ ಮಕ್ಕಳನ್ನು ಕಸಿದುಕೊಂಡಿದೆ” ಎಂದು ರಾಹುಲ್ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಒಂದು ದಶಕದಲ್ಲಿ ದೇಶದಾದ್ಯಂತ ಸುಮಾರು 7.5 ಕೋಟಿ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ತೊಂದರೆ ಅನುಭವಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕೋಚಿಂಗ್ ಸೆಂಟರ್ಗಳು, ಪರೀಕ್ಷಾ ಕೇಂದ್ರಗಳು, ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರು, ಭಾಷಾಂತರಕಾರರು, ಸಾರಿಗೆ ಸಂಸ್ಥೆಗಳು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಶಿಕ್ಷಣ ಸಚಿವಾಲಯದವರೆಗೆ ಇಡೀ ಶಿಕ್ಷಣ ವ್ಯವಸ್ಥೆಯೇ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಅವರು ದೂರಿದ್ದಾರೆ.
ಪ್ರಸ್ತುತ ಇರುವ ಪರೀಕ್ಷಾ ಮಾದರಿಯು ಹಳೆಯದಾಗಿದ್ದು, ಇಂದಿನ ವ್ಯವಸ್ಥೆಯು ಪರೀಕ್ಷಕರು ಮತ್ತು ಸರ್ಕಾರದ ಸುತ್ತ ಸುತ್ತುತ್ತಿದೆ. ಆದರೆ ನಮಗೆ ವಿದ್ಯಾರ್ಥಿ ಕೇಂದ್ರಿತ ಮತ್ತು ಸುಲಭವಾಗಿ ಹೊಂದಿಕೊಳ್ಳುವ (flexible) ವ್ಯವಸ್ಥೆಯ ಅಗತ್ಯವಿದೆ. ಜಿಮ್ಯಾಟ್ (GMAT) ಪರೀಕ್ಷೆಗಳ ಮಾದರಿಯಲ್ಲಿ ಸುರಕ್ಷಿತ ಪ್ರಶ್ನೆ ಬ್ಯಾಂಕ್ ಗಳನ್ನು ರಚಿಸಿ, ತಂತ್ರಜ್ಞಾನದ ಸಹಾಯದಿಂದ ಪ್ರಶ್ನೆಪತ್ರಿಕೆಗಳನ್ನು (randomized) ಸಿದ್ಧಪಡಿಸಬೇಕು.
ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗಳು ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣ ಹೊಂದಿರಬಾರದು. ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವುದು ಯಾವುದೇ ಒಂದು ಪಕ್ಷದ ವಿಷಯವಲ್ಲ, ಅದು ಎಲ್ಲರ ಜಂಟಿ ಜವಾಬ್ದಾರಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಮುನ್ನೆಲೆಗೆ ತರಲು ಕಾಂಗ್ರೆಸ್ ದೇಶಾದ್ಯಂತ ‘ಛಾತ್ರೋಂ ಕಿ ಗೂಂಜ್’ ಅಭಿಯಾನವನ್ನು ನಡೆಸುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























