ಮದುವೆಗೆ ಒಪ್ಪದ 16 ವರ್ಷದ ಬಾಲಕಿಯ ಮನೆಗೆ ನುಗ್ಗಿ ಯುವಕನಿಂದ ನೀಚ ಕೃತ್ಯ! - Mahanayaka
5:38 AM Wednesday 20 - August 2025

ಮದುವೆಗೆ ಒಪ್ಪದ 16 ವರ್ಷದ ಬಾಲಕಿಯ ಮನೆಗೆ ನುಗ್ಗಿ ಯುವಕನಿಂದ ನೀಚ ಕೃತ್ಯ!

bommalinganahalli
26/05/2021


Provided by

ಮೊಳಕಾಲ್ಮುರು: ಮದುವೆಗೆ ಒಪ್ಪದ ಬಾಲಕಿಯ ಕುತ್ತಿಗೆಗೆ ವೇಲ್‌ ಬಿಗಿದು ಕೊಲೆ ಮಾಡಿ ಆತ್ಮಹತ್ಯೆ ಎಂಬಂತೆ ಬಿಂಬಿಸಲು ಯತ್ನಿಸಿದ ಪ್ರಕರಣ ತಾಲ್ಲೂಕಿನ ಬೊಮ್ಮಲಿಂಗನಹಳ್ಳಿಯಲ್ಲಿ ಸೋಮವಾರ ನಡೆದಿದೆ.

ಶಿವಣ್ಣ ಎಂಬುವರ 16 ವರ್ಷ ವಯಸ್ಸಿನ  ಪುತ್ರಿ ಶ್ವೇತಾ ಕೊಲೆಯಾದ ಬಾಲಕಿ. ಈಕೆ  9 ತರಗತಿ ವ್ಯಾಸಂಗ ಮಾಡುತ್ತಿದ್ದಳು. ಘಟನೆಗೆ ಸಂಬಂಧಿಸಿದಂತೆ ಕೊಲೆ ಆರೋಪದಡಿ ಎಂಟು ಜನರ ವಿರುದ್ಧ ಮೊಳಕಾಲ್ಮುರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓಬಳಶಟ್ಟಿಹಳ್ಳಿಯ ಶಿವಣ್ಣ ಹಾಗೂ ಪೆನ್ನಕ್ಕ ದಂಪತಿಯ ಇಬ್ಬರು ಪುತ್ರಿಯರು ಬೊಮ್ಮಲಿಂಗನಹಳ್ಳಿಯ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಹಾನಗಲ್‌ ಗ್ರಾಮದಲ್ಲಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಿತ್ಯ ಹಳ್ಳಿಯಿಂದ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದರು ಎನ್ನಲಾಗಿದೆ.

ಆರು ತಿಂಗಳ ಹಿಂದೆ ಮಾರ್ಗ ಮಧ್ಯದಲ್ಲಿ ಕಾಣಿಸಿಕೊಂಡ ಬೊಮ್ಮಲಿಂಗನಹಳ್ಳಿ ನವೀನ್‌ (20) ಪ್ರೀತಿಸುವಂತೆ ಶ್ವೇತಾಳಿಗೆ ಪೀಡಿಸುತ್ತಿದ್ದನು ಎಂದು ಚಿಕ್ಕಮ್ಮ ಶಿವಮ್ಮ ಎಂಬುವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರೀತಿ ನಿರಾಕರಿಸಿದರೂ ಬೆಂಬಿಡದ ಆರೋಪಿ ಯುವಕರ ಗುಂಪು ಕಟ್ಟಿಕೊಂಡು ಬಾಲಕಿಯನ್ನು ಪೀಡಿಸಿದ್ದಾನೆ. ಮದುವೆಗೆ ಒಪ್ಪದಿದ್ದರೆ ನೇಣು ಹಾಕಿ ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾನೆ. ಇದನ್ನು ಬಾಲಕಿ ಪೋಷಕರ ಗಮನಕ್ಕೆ ತಂದಿದ್ದಳು ಎಂದು ತಿಳಿದು ಬಂದಿದೆ.

ಬಾಲಕಿಯ ಮಾತನನ್ನು ಪೋಷಕರು ಗಂಭೀರವಾಗಿ ಪರಿಗಣಿಸದೇ ಬೇಜವಾಬ್ದಾರಿ ತೋರಿದ್ದಾರೆ. ಮೇ 24ರಂದು ಶ್ವೇತಾ ಹೊರತುಪಡಿಸಿ ಮನೆಯವರೆಲ್ಲರೂ ಕೂಲಿ ಕೆಲಸಕ್ಕೆ ತೆರಳಿದ್ದರು. ಈ ಸಂದರ್ಭ ನೋಡಿಕೊಂಡು ಮನೆಗೆ ನುಗ್ಗಿದ ನವೀನ್ ಹಾಗೂ ಇತರರು ಬಾಲಕಿಯ ಕುತ್ತಿಗೆಗೆ ವೇಲ್ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ