ಕುಡಿದು ಬಂದ ತಂದೆ ತನ್ನ ಮಗನನ್ನೇ ಕಡಿದು ಕೊಂದ | ತಂದೆಯ ಕುಡಿತದ ಚಟಕ್ಕೆ ಬಲಿಯಾದ ಮಗ - Mahanayaka
11:30 PM Wednesday 15 - October 2025

ಕುಡಿದು ಬಂದ ತಂದೆ ತನ್ನ ಮಗನನ್ನೇ ಕಡಿದು ಕೊಂದ | ತಂದೆಯ ಕುಡಿತದ ಚಟಕ್ಕೆ ಬಲಿಯಾದ ಮಗ

poonjala katte
23/06/2021

ಪುಂಜಾಲಕಟ್ಟೆ: ತಂದೆಯೇ ಮಗನನ್ನು ಕತ್ತಿಯಿಂದ ಕೊಚ್ಚಿ ಕೊಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ನಡೆದಿದ್ದು, ಮಗನನ್ನು ಹತ್ಯೆ ಮಾಡಿದ ಬಳಿಕ ತಂದೆಯೂ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.


Provided by

 

58 ವರ್ಷ ವಯಸ್ಸಿನ ಬಾಬು ನಾಯ್ಕ ತನ್ನ ಮಗನನ್ನೇ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಘಟನೆ ವೇಳೆ ಬಾಬು ನಾಯ್ಕನ ಪತ್ನಿ ಸುಗಂಧಿ ಅವರು ಇಲ್ಲಿನ ಫ್ಯಾಕ್ಟರಿಯೊಂದಕ್ಕೆ ಕೆಲಸಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ.

 

ಪುಂಜಾಲಕಟ್ಟೆ ಸರ್ಕಾರಿ ಆಸ್ಪತ್ರೆಯ ಸಮೀಪದ ಶ್ರೀರಾಮ ಭಜನಾ ಮಂದಿರದ ಬಳಿಯಲ್ಲಿ ಬಾಬು ನಾಯ್ಕ ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ಹಾಗೂ ಮಗನೊಂದಿಗೆ ವಾಸಿಸುತ್ತಿದ್ದ. ಬಾಬು ನಾಯ್ಕನಿಗೆ ತೀವ್ರ ಕುಡಿತದ ಚಟವಿದ್ದು, ತನ್ನ ಮಗನೊಂದಿಗೆ ಆಗಾಗ ಜಗಳ ಮಾಡುತ್ತಿದ್ದ ಎಂದು ಹೇಳಲಾಗಿದೆ.

 

ಬುಧವಾರ ಮಧ್ಯಾಹ್ನ ಕೂಡ ತಂದೆ ಮಗನ ನಡುವೆ ಜಗಳ ನಡೆದಿದೆ. ಈ ವೇಳೆ ಕುಡಿತದ ಮತ್ತಿನಲ್ಲಿ ಬಾಬು ನಾಯ್ಕ ಮಗನನ್ನು ಕತ್ತಿಯಿಂದ ಕೊಚ್ಚಿ ಹತ್ಯೆ ಮಾಡಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

 

ಪುಂಜಾಲಕಟ್ಟೆಯ ಶಾಲೆಯೊಂದರಲ್ಲಿ ಓದುತ್ತಿದ್ದ ಸಾತ್ವಿಕ್ ತನ್ನ ತಂದೆಯ ಕುಡಿತದ ಚಟಕ್ಕೆ ಬಲಿಯಾಗಿದ್ದಾನೆ. ಮಧ್ಯಾಹ್ನದ ವೇಳೆ ಸುಗಂಧಿ ಅವರು ಮಗನಿಗೆ ಕರೆ ಮಾಡಿದಾಗ ಆತ ಫೋನ್ ರಿಸಿವ್ ಮಾಡಲಿಲ್ಲ. ಇದರಿಂದ ಅನುಮಾನಗೊಂಡು ಮನೆಗೆ ಬಂದಾಗ ತನ್ನ ಪತಿ ನಡೆಸಿದ ಅನಾಹುತದಿಂದ ಸುಗಂಧಿ ಆಘಾತಕ್ಕೊಳಗಾಗಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಠಾಣಾಧಿಕಾರಿ ಸೌಮ್ಯಾ ಜೆ. ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಸ್ಥಳೀಯ ಜನಪ್ರತಿನಿಧಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇತ್ತೀಚಿನ ಸುದ್ದಿ