ಡಬಲ್ ಟೋಲ್: ಪ್ರಧಾನಿಗೆ ಪತ್ರ ಬರೆಯುವ ರಘುಪತಿ ಭಟ್ ಹೇಳಿಕೆ ಹಾಸ್ಯಾಸ್ಪದ: ರಮೇಶ್ ಕಾಂಚನ್ - Mahanayaka
10:23 AM Thursday 21 - August 2025

ಡಬಲ್ ಟೋಲ್: ಪ್ರಧಾನಿಗೆ ಪತ್ರ ಬರೆಯುವ ರಘುಪತಿ ಭಟ್ ಹೇಳಿಕೆ ಹಾಸ್ಯಾಸ್ಪದ: ರಮೇಶ್ ಕಾಂಚನ್

ramesh kanchan
28/11/2022


Provided by

ಉಡುಪಿ: ರದ್ದಾಗುವ ಸುರತ್ಕಲ್ ಟೋಲ್ ಗೇಟಿನ ಸುಂಕವನ್ನೂ ಸೇರಿಸಿ ಹೆಜಮಾಡಿಯಲ್ಲಿ ಡಬಲ್ ಟೋಲ್ ವಸೂಲು ಮಾಡುವುದರ ವಿರುದ್ಧ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುವ ಉಡುಪಿ ಶಾಸಕ ರಘುಪತಿ ಭಟ್ ಹೇಳಿಕೆ ಹಾಸ್ಯಾಸ್ಪದ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಜನರ ಸಂಕಷ್ಟಗಳ ಬಗ್ಗೆ ನೈಜ ಕಾಳಜಿ ಇದ್ದರೆ ರಘುಪತಿ ಭಟ್ ಅವರು ಉಡುಪಿ ಜಿಲ್ಲೆಯ ಎಲ್ಲಾ ಐದು ಮಂದಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರನ್ನು ಕೂಡಿಕೊಂಡು ಟೋಲ್ ಹೆಸರಿನಲ್ಲಿ ಜನಸಾಮಾನ್ಯರನ್ನು ದರೋಡೆ ಮಾಡುವ ಸರಕಾರದ ಆದೇಶದ ವಿರುದ್ಧ ರೊಚ್ಚಿಗೆದ್ದು ಪ್ರತಿಭಟಿಸಬೇಕಿತ್ತು. ಎಲ್ಲಾ ಜನ ಪ್ರತಿನಿಧಿಗಳನ್ನು ಸಂಘಟಿಸಿ ಉಗ್ರ ಪ್ರತಿಭಟನೆ ಮಾಡಬೇಕಿತ್ತು. ಅದು ಬಿಟ್ಟು ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುತ್ತೇನೆ, ಸಂಸದರಿಗೆ ಪತ್ರ ಬರೆಯುತ್ತೇನೆ ಎಂದು ಬೂಟಾಟಿಕೆಯ ಹೇಳಿಕೆ ನೀಡುತ್ತಿರುವುದು ಅವರ ಉದ್ದೇಶದ ಬಗ್ಗೆ ಜನ ಸಾಮಾನ್ಯರಲ್ಲಿ ಸಂಶಯಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಕೊರೋನಾ ಹಾವಳಿ, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿರುವ ಈ ಕಾಲಘಟ್ಟದಲ್ಲಿ ಕಡಿತಗೊಳ್ಳುವ ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿ ಟೋಲ್‌ ಗೆ ಸೇರಿಸಿ ಡಬ್ಬಲ್ ಸುಂಕ ವಸೂಲಿ ಮಾಡುವುದೆಂದರೆ ನೇರವಾಗಿ ಜನರ ಜೇಬಿಗೇ ಕನ್ನ ಹಾಕಿದಂತೆ.  ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಇಂತಹ ಜನ ವಿರೋಧಿ ನಿರ್ಧಾರ ಕೈಗೊಳ್ಳುವಾಗ, ಅದೂ ಸಹ ಚುನಾವಣಾ ವರ್ಷದಲ್ಲಿ ಇಂತಹ ಜನ ವಿರೋಧಿ ಕೈಗೊಳ್ಳುವಾಗ ಒಬ್ಬ ಜನ ಪ್ರತಿನಿಧಿಯಾಗಿ ಶಾಸಕರು ಬರೇ ಪತ್ರ ಬರೆದು, ಪತ್ರಿಕಾ ಹೇಳಿಕೆ ನೀಡಿ ಅಥವಾ ಟ್ವೀಟ್ ಮಾಡಿ ಜನರ ಸಿಂಪತಿ ಗಳಿಸಲು ಪ್ರಯತ್ನಿಸುವ ಬದಲು ಫೀಲ್ಡಿಗಿಳಿದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿ. ಶಾಸಕ ಭಟ್ಟರ ನಿಯತ್ತು ಜನಪರವಾಗಿ ಇರುವುದೇ ಆದರೆ ಪ್ರತಿಭಟನಾ ನಿರತರ ಸದುದ್ದೇಶದ ಬಗ್ಗೆ ಸಂಶಯ ವ್ಯಕ್ತಪಡಿಸುವ ಬದಲು ಶಾಸಕರನ್ನು ಒಟ್ಟುಗೂಡಿಸಿ, ಸಂಸದರನ್ನು ಕರೆಸಿ ತಾವೇ ಪ್ರತಿಭಟನೆ ಆಯೋಜಿಸಲಿ ಎಂದು ರಮೇಶ್ ಕಾಂಚನ್ ಸವಾಲೆಸೆದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ