ದೆಹಲಿ ಹಿಂಸಾಚಾರ: ರೈತರ ಸೋಗಿನಲ್ಲಿ ಅನ್ಯಶಕ್ತಿಗಳು ಸೇರಿರಬಹುದು | ಕುಮಾರಸ್ವಾಮಿ - Mahanayaka
11:08 PM Thursday 13 - August 2026

ದೆಹಲಿ ಹಿಂಸಾಚಾರ: ರೈತರ ಸೋಗಿನಲ್ಲಿ ಅನ್ಯಶಕ್ತಿಗಳು ಸೇರಿರಬಹುದು | ಕುಮಾರಸ್ವಾಮಿ

27/01/2021

ಬೆಂಗಳೂರು: ರೈತರ ಐತಿಹಾಸಿಕ ಹೋರಾಟದ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರ ದುರದೃಷ್ಟಕರ. ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳು ಇದರಲ್ಲಿ ಸೇರಿರಬಹುದು. ಈಗಾಗಲೇ ರೈತರೂ ಇದನ್ನು ಸ್ಪಷ್ಟಪಡಿಸಿದ್ದಾರೆ. ನ್ಯಾಯವಾದ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂಥ ಕೃತ್ಯಕ್ಕೆ ಕೈಹಾಕಲಾರರು ಎಂಬುದೂ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ನಿನ್ನೆ ದೆಹಲಿಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಇಂದು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ನಾಲ್ವರು ರೈತ ಮುಖಂಡರನ್ನು ಕೊಲ್ಲಲೆಂದು ಸಂಚು ನಡೆಸಿದ ಘಟನೆಗಳು ಈಗಾಗಲೇ ನಡೆದು ಹೋಗಿದೆ. ಅದಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ಹಿಡಿದು ರೈತರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರೈತರ ಹೋರಾಟವನ್ನೇ ತಲೆಕೆಳಗು ಮಾಡಲು ಪ್ರಯತ್ನಗಳು ನಡೆಯದೇ ಇರುತ್ತವೆಯೇ? ಖಂಡಿತವಾಗಿಯೂ ಅನ್ಯ ಶಕ್ತಿಗಳು ಇದರ ಹಿಂದೆ ಇರುವ ಸಾಧ್ಯತೆಗಳಿವೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಇದು ಸೂಕ್ತ ಮಾತುಕತೆ ಮೂಲಕ ಬಗೆಹರಿಯುವ ಸಮಸ್ಯೆ. ಸುಪ್ರೀಂ ಕೋರ್ಟ್‌ ಕೂಡ ಇದನ್ನೇ ಹೇಳಿದೆ. ಆದರೆ, ಹಾಗೆ ಆಗದೇ ಇರುವುದು ಬೇಸರದ ಸಂಗತಿ. ಈ ಘಟನೆಯನ್ನು ಆಡಳಿತದಲ್ಲಿರುವವರು ತಪ್ಪಿಸಬಹುದಿತ್ತು. ಘಟನೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಈಗಲೂ ಕಾಲ ಮಿಂಚಿಲ್ಲ. ಸೌಹಾರ್ದ ಮಾರ್ಗ ಇದಕ್ಕೆ ಮದ್ದು ಎಂದು ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

ಇತ್ತೀಚಿನ ಸುದ್ದಿ