ಬಿಜೆಪಿ ವಿರುದ್ಧ ಅಸ್ಪೃಶ್ಯತೆ ಆರೋಪ ಹೊರಿಸಿದ ಮಲ್ಲಿಕಾರ್ಜುನ ಖರ್ಗೆ - Mahanayaka
1:09 AM Thursday 10 - September 2026

ಬಿಜೆಪಿ ವಿರುದ್ಧ ಅಸ್ಪೃಶ್ಯತೆ ಆರೋಪ ಹೊರಿಸಿದ ಮಲ್ಲಿಕಾರ್ಜುನ ಖರ್ಗೆ

mallikarjuna kharge.jpg
13/08/2026

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದ ವೇದಿಕೆಯನ್ನು ಬಿಜೆಪಿ ಹಾಗೂ ಹಿಂದುತ್ವ ಬೆಂಬಲಿತ ಸಂಘಟನೆಗಳು ‘ಶುದ್ಧೀಕರಣ’ ಗೊಳಿಸಿವೆ ಎಂದು ಆರೋಪಿಸಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನ ಅಧಿವೇಶನದಲ್ಲಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಅಸ್ಪೃಶ್ಯತೆಯ ಆಚರಣೆಗಳು ಸಂಪೂರ್ಣವಾಗಿ ಖಂಡನೀಯ ಎಂದು ಕಿಡಿಕಾರಿದ್ದಾರೆ.

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಆದರೆ, ಅವರ ಭಾಷಣ ಮುಗಿದ ಎರಡು ದಿನಗಳ ನಂತರ ಬಿಜೆಪಿ ಕಾರ್ಯಕರ್ತರು ವೇದಿಕೆಗೆ ಹವನ ಹಾಗೂ ಪೂಜೆ ನಡೆಸಿ ‘ಶುದ್ಧೀಕರಣ’ ಮಾಡಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಸಮಾವೇಶದಲ್ಲಿ ತಾವು ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಮಾತನಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದ ಖರ್ಗೆ, ಈ ರೀತಿ ವೇದಿಕೆಯನ್ನು ಶುದ್ಧೀಕರಣ ಮಾಡಿರುವುದು ದಲಿತ ಸಮುದಾಯಕ್ಕೆ ಹಾಗೂ ತಮಗೆ ಮಾಡಿದ ಘೋರ ಅಪಮಾನವಾಗಿದೆ ಎಂದಿದ್ದಾರೆ. ಸಮಾಜದಲ್ಲಿ ಇಂದಿಗೂ ಇಂತಹ ಅಸ್ಪೃಶ್ಯತೆ ಜೀವಂತವಾಗಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಖೇದ ವ್ಯಕ್ತಪಡಿಸಿದ ಅವರು, ಈ ಕೃತ್ಯ ಎಸಗಿದವರ ವಿರುದ್ಧ ಅಸ್ಪೃಶ್ಯತೆ ತಡೆ ಕಾಯ್ದೆಯಡಿ ತಕ್ಷಣವೇ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಖರ್ಗೆ ಅವರ ಈ ಆರೋಪಕ್ಕೆ ಸದನದಲ್ಲಿ ತಕ್ಷಣವೇ ಸ್ಪಂದಿಸಿದ ಕೇಂದ್ರ ಸಚಿವ ಹಾಗೂ ರಾಜ್ಯಸಭೆಯ ನಾಯಕ ಜೆ.ಪಿ. ನಡ್ಡಾ, ಬಿಜೆಪಿ ಎಂದಿಗೂ ಇಂತಹ ಅಸ್ಪೃಶ್ಯತೆ ಅಥವಾ ತಾರತಮ್ಯದ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಖರ್ಗೆ ಅವರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಅದು ನಿಜಕ್ಕೂ ವಿಷಾದಕರ ಸಂಗತಿಯಾಗಿದ್ದು, ಈ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯಸಭಾ ಸಭಾಪತಿಗಳು ಸಹ ಈ ವಿಷಯದ ಕುರಿತು ಪ್ರತಿಕ್ರಿಯಿಸಿ, ಪಕ್ಷಾತೀತವಾಗಿ ನಾವೆಲ್ಲರೂ ಅಸ್ಪೃಶ್ಯತೆಯನ್ನು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದರು. ಘಟನೆಯ ಕುರಿತು ಸರಕಾರವು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜಾರಿಗೆ ತರಬೇಕು ಎಂದು ಸೂಚಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti