ದೆಹಲಿ ಹಿಂಸಾಚಾರ | ಆರೋಪಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು?
28/01/2021
ನವದೆಹಲಿ: ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.
ಭಾರತೀಯ ದಂಡಸಂಹಿತೆ 124ಎ (ದೇಶದ್ರೋಹ) ಅನ್ವಯ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ನಟ ದೀಪ್ ಸಿಧು ಮತ್ತು ಗ್ಯಾಂಗ್‌ಸ್ಟರ್ ಲಖಾ ಸಿಧಾನಾ ವಿರುದ್ಧ ಕೆಂಪುಕೋಟೆ ಬಳಿ ನಡೆದಿದ್ದ ದಾಂದಲೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿತ್ತು.
ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ಕೆಂಪು ಕೋಟೆಗೆ ಹತ್ತಿದ ರೈತರು ಅಲ್ಲಿ ತಮ್ಮ ಬಾವುಟಗಳನ್ನು ಹಾರಿಸಿದ್ದಾರೆ. ಸಾವಿರಾರು ರೈತರು ಪೊಲೀಸರ ಜೊತೆಗೆ ಸಂಘರ್ಷಕ್ಕಿಳಿದಿದ್ದರು.
ದೆಹಲಿ ಗಡಿಪ್ರದೇಶದಲ್ಲಿ 60 ದಿನಗಳಿಂದಲೂ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಜನವರಿ 26 ಗಣರಾಜ್ಯೋತ್ಸವ ದಿನದಂದೇ ದೆಹಲಿಯಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದ್ದು, ದೆಹಲಿಯಲ್ಲಿ ಹಿಂಸಾಚಾರ ನಡೆದಿದೆ.


























