ರೈತರ ಪ್ರತಿಭಟನೆ ನಿಲ್ಲಿಸಲು, ರೈತರನ್ನು ಕೇಂದ್ರ ಸರ್ಕಾರ ಕೆರಳಿಸಿದೆ | ದೆಹಲಿ ಹಿಂಸಾಚಾರಕ್ಕೆ ಶಿವಸೇನೆ ಪ್ರತಿಕ್ರಿಯೆ
ಮುಂಬೈ: ರೈತರ ಪ್ರತಿಭಟನೆ ನಿಲ್ಲಿಸಲು ಸಾಧ್ಯವಾಗದೇ ಕೇಂದ್ರ ಸರ್ಕಾರವು ರೈತರ ಪ್ರತಿಭಟನೆಗೆ ಕೆಟ್ಟ ಹೆಸರು ತಂದಿದೆ. ರೈತರನ್ನು ಕೆರಳಿಸಿ ಪ್ರತಿಭಟನೆ ಹಿಂಸಾಸ್ವರೂಪ ಪಡೆಯುವಂತೆ ಮಾಡಲಾಗಿದೆ ಎಂದು ಶಿವಸೇನೆ ಆರೋಪಿಸಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಸಂಪಾದಕೀಯ ಬರೆದಿರುವ ಶಿವಸೇನೆ, ರೈತರ ಪ್ರತಿಭಟನೆಗೆ ಕೆಟ್ಟ ಹೆಸರು ಬರಬೇಕು ಎನ್ನುವುದು ಕೇಂದ್ರ ಸರ್ಕಾರದ ಬಯಕೆಯಾಗಿತ್ತು. ಅದು ಜನವರಿ 26ರಂದು ನೆರವೇರಿದೆ. ಕಳೆದ 60 ದಿನಗಳಿಂದ ದೆಹಲಿ ಗಡಿ ಪ್ರದೇಶದಲ್ಲಿ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ದೆಹಲಿಯಲ್ಲಿ ರೈತರನ್ನು ಕೆರಳಿಸಿ ರೈತರ ಪ್ರತಿಭಟನೆಗೆ ಕೆಟ್ಟ ಹೆಸರು ತರಲಾಗಿದೆ ಎಂದು ಸಾಮ್ನಾ ಹೇಳಿದೆ.
ಹಲವು ದಿನಗಳಿಂದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮನವಿ ಮಾಡುತ್ತಿದ್ದಾರೆ. ಅದಕ್ಕೆ ಬೆಲೆ ಇಲ್ಲವೇ. ಪಂಜಾಬ್ ರೈತರ ಸ್ವಾಭಿಮಾನ ಕೇಂದ್ರ ಸರ್ಕಾರಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ. ಆದರೆ ಈ ಎಲ್ಲ ವಿಚಾರಗಳನ್ನು ಬಿಟ್ಟು ರೈತರು ಕಾನೂನು ಮುರಿದಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಸಾಮ್ನಾ ಹೇಳಿದೆ.