ಸ್ವಾತಂತ್ರ್ಯ ದಿನ: ಪ್ರಧಾನಿ ಭಾಷಣ ಮಾಡಲಿರುವ ಕೆಂಪು ಕೋಟೆ ಸುತ್ತ ಹದ್ದಿನ ಕಣ್ಣು - Mahanayaka

ಸ್ವಾತಂತ್ರ್ಯ ದಿನ: ಪ್ರಧಾನಿ ಭಾಷಣ ಮಾಡಲಿರುವ ಕೆಂಪು ಕೋಟೆ ಸುತ್ತ ಹದ್ದಿನ ಕಣ್ಣು

14/08/2023

ದೇಶದ ರಾಜಧಾನಿಯಲ್ಲಿ ಆಗಸ್ಟ್ 15 ರಂದು 77 ನೇ ಸ್ವಾತಂತ್ರ್ಯ ದಿನಾಚರಣೆಗೆ ಸರ್ವ ಸಿದ್ಧತೆಗಳನ್ನು ನಡೆಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿರುವ ಕೆಂಪು ಕೋಟೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಒಂದು ಸಾವಿರ ಮುಖ ಗುರುತಿಸುವ ಕೆಮರಾಗಳು, ಆಂಟಿ-ಡ್ರೋನ್ ವ್ಯವಸ್ಥೆಗಳನ್ನು ಆಳವಡಿಸಲಾಗಿದೆ. ಇದರೊಂದಿಗೆ 10 ಸಾವಿರ ಪೊಲೀಸರು ಭದ್ರತೆ ಕಾರ್ಯದಲ್ಲಿ ತೊಡಗಿದ್ದಾರೆ.

ಕೋವಿಡ್ -19 ನಿರ್ಬಂಧಗಳನ್ನು ಹೊಂದಿರದ ಈ ಬೃಹತ್ ಮಟ್ಟದ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ಕಟ್ಟುನಿಟ್ಟಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಹರಿಯಾಣದ ನೂಹ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ವಿಶೇಷ ಆಯುಕ್ತ ದೇಪೇಂದ್ರ ಪಾಠಕ್,
ಈ ವರ್ಷ ಯಾವುದೇ ಕೋವಿಡ್ -19 ನಿರ್ಬಂಧಗಳಿಲ್ಲ. ಹೀಗಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಪೂರ್ಣ ಉತ್ಸಾಹದಿಂದ ಆಚರಿಸಲಾಗುತ್ತದೆ. ಹೀಗಾಗಿ ದೃಢವಾದ ಮತ್ತು ಸಮರ್ಪಕವಾಗಿ ಪೊಲೀಸರ ನಿಯೋಜನೆ ಮಾಡಲಾಗಿರುವುದನ್ನು ಖಾತ್ರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೊಸದಿಲ್ಲಿ ಪೊಲೀಸರು ಭದ್ರತಾ ಉದ್ದೇಶಗಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಲಿದ್ದಾರೆ. ಇದರ ಪೂರ್ವಾಭ್ಯಾಸ ನಡೆಸಲಾಗುತ್ತಿದೆ. ಕೆಂಪು ಕೋಟೆಯ ಮುಂಭಾಗದಲ್ಲಿರುವ ಜ್ಞಾನ ಪಥವನ್ನು ಹೂವುಗಳು ಮತ್ತು G20 ಚಿಹ್ನೆಗಳಿಂದ ಅಲಂಕರಿಸಲಾಗುವುದು. ಉಳಿದಂತೆ ಯಾವುದೇ ಪ್ರಮುಖ ಅಲಂಕಾರವಿರುವುದಿಲ್ಲ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ