ಮಗಳ ಅಂತ್ಯಸಂಸ್ಕಾರ ಕಳೆದು ಒಂದು ತಿಂಗಳ ಬಳಿಕ ಸತ್ತಿದ್ದಳೆಂದು ಭಾವಿಸಿದ್ದ ಮಗಳಿಂದ ಬಂತು ಕರೆ!

ಪಾಟ್ನಾ: ತನ್ನ ಮಗಳು ಎಂದು ತಿಳಿದು ಅಪರಿಚಿತ ಮಗುವಿನ ಅಂತ್ಯಸಂಸ್ಕಾರ ನಡೆಸಿದ್ದ ತಂದೆ ತೀವ್ರ ದುಃಖದಲ್ಲಿರುವಾಗಲೇ ಆತನಿಗೆ ಕರೆಯೊಂದು ಬರುತ್ತದೆ. ಆ ಕಡೆಯಿಂದ “ಅಪ್ಪಾ ನಾನು ಬದುಕಿದ್ದೇನೆ” ಎಂಬ ಮಗಳ ಧ್ವನಿ ಕೇಳುತ್ತಿದ್ದಂತೆಯೇ ತಂದೆ ಖುಷಿಯಲ್ಲಿ ಕುಣಿದಾಡಿದ್ದಾನೆ.
ಈ ಘಟನೆ ನಡೆದಿರೋದು ಬಿಹಾರದ ಪಾಟ್ನಾದಲ್ಲಿ ಅಂಶು ಎಂಬ ಯುವತಿಯೊಬ್ಬಳು ನಾಪತ್ತೆಯಾಗಿದ್ದಳು… ಒಂದು ತಿಂಗಳ ಅಂತರದಲ್ಲಿ ಕಾಲುವೆಯೊಂದರಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿದ್ದು, ತನ್ನ ಮಗಳು ಧರಿಸಿದ್ದ ಬಟ್ಟೆಗೂ ಆ ಮೃತದೇಹದಲ್ಲಿದ್ದ ಬಟ್ಟೆಗೂ ಹೋಲಿಕೆ ಕಂಡು ಬಂದಿದ್ದರಿಂದಾಗಿ ತನ್ನ ಮಗಳು ಎಂದು ಭಾವಿಸಿ ತಂದೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾನೆ.
ಅತ್ತ ಅಂಶು ತನ್ನ ಹೆತ್ತವರನ್ನ ಬಿಟ್ಟು ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ತಾನು ಎಂದು ಭಾವಿಸಿ ತಂದೆ ಅಂತ್ಯ ಸಂಸ್ಕಾರ ನಡೆಸಿರುವ ಸುದ್ದಿ ಆಕೆಗೆ ತಲುಪುತ್ತಿದ್ದಂತೆಯೇ ಆಕೆ ತನ್ನ ತಂದೆಗೆ ವಿಡಿಯೋ ಕರೆ ಮಾಡಿದ್ದು, ನಾನು ಬದುಕಿರೋದಾಗಿ ತಂದೆಗೆ ತಿಳಿಸಿದ್ದಾಳೆ.
ಹಾಗಿದ್ರೆ.. ಶವಸಂಸ್ಕಾರ ಮಾಡಲಾದ ಮೃತದೇಹ ಯಾರದ್ದು ಎನ್ನುವುದು ಇದೀಗ ಪೊಲೀಸರ ಮುಂದಿರುವ ಪ್ರಶ್ನೆಯಾಗಿತ್ತು. ಇದೀಗ ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದ್ದು, ಯುವತಿಯೋರ್ವಳನ್ನು ಮರ್ಯಾದೆಗೇಡು ಹತ್ಯೆ ನಡೆಸಲಾಗಿದ್ದು, ಆಕೆಯ ಪೋಷಕರೇ ಈ ಕೃತ್ಯ ನಡೆಸಿದ್ದು, ಇದೀಗ ಅವರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.