ಇಂದು ಡಾ.ಅಂಬೇಡ್ಕರ್ ಧರ್ಮಪತ್ನಿ ರಮಾಬಾಯಿ ಬಾಯಿ ಅವರ ಜನ್ಮದಿನ | ಅಂಬೇಡ್ಕರ್ ಅವರ ಸಾಧನೆಗೆ ರಮಾಬಾಯಿಯ ತ್ಯಾಗ ಹೇಗಿತ್ತು? - Mahanayaka
2:53 PM Wednesday 20 - August 2025

ಇಂದು ಡಾ.ಅಂಬೇಡ್ಕರ್ ಧರ್ಮಪತ್ನಿ ರಮಾಬಾಯಿ ಬಾಯಿ ಅವರ ಜನ್ಮದಿನ | ಅಂಬೇಡ್ಕರ್ ಅವರ ಸಾಧನೆಗೆ ರಮಾಬಾಯಿಯ ತ್ಯಾಗ ಹೇಗಿತ್ತು?

07/02/2021


Provided by

ಭಾರತಕ್ಕೆ ಅದ್ಭುತವಾದ ಸಂವಿಧಾನವನ್ನು ಕೊಟ್ಟ ಡಾ.ಬಾಬಾ.ಸಾಹೇಬ್ ಅಂಬೇಡ್ಕರ್ ಅವರ ಧರ್ಮಪತ್ನಿ ಮಾತೆ ರಮಾಬಾಯಿ ಅಂಬೇಡ್ಕರ್ ಅವರ ಜನ್ಮ ದಿನ ಇಂದು. 1898 ಫೆಬ್ರವರಿ 7 ರಂದು ರಮಾಬಾಯಿ ಅವರು ಜನಿಸುತ್ತಾರೆ. ಭಿಕು ವಳಗಂಕರ್ ಮತ್ತು ತಾಯಿ ರುಕ್ಮಿಣಿ ದಂಪತಿ ಅವರ ಮಗಳಾಗಿರುವ ಇವರು 1906ರಲ್ಲಿ ಭೀಮರಾವ್(ಅಂಬೇಡ್ಕರ್) ಅವರನ್ನು ವಿವಾಹವಾಗುತ್ತಾರೆ.

ಅಂದಿನ ಕಾಲದಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದುದರಿಂದ ಈ ವಿವಾಹ ನಡೆದಾಗ ಅಂಬೇಡ್ಕರ್ ಅವರಿಗೆ 14 ವರ್ಷ ವಯಸ್ಸಾಗಿತ್ತು. ರಮಾಬಾಯಿ ಅವರಿಗೆ 9 ವರ್ಷ ವಯಸ್ಸಾಗಿತ್ತು. ರಮಾಬಾಯಿ ಅವರ ತಂದೆ ಮುಂಬೈ ಬಂದರ್ ನಲ್ಲಿ ಹಡಗುಗಳಿಗೆ ಮೀನು ತುಂಬುವ ವೃತ್ತಿ ಮಾಡುತ್ತಿದ್ದರು. ಮಾರುಕಟ್ಟೆಯಲ್ಲಿ ವ್ಯವಹಾರ ಮುಗಿಸಿದ ಬಳಿಕ ಸಂಜೆ ಭೀಮ್ ರಾವ್ ಹಾಗೂ ರಮಾಬಾಯಿ ಅವರ ಎರಡು ಕುಟುಂಬಗಳು ಮೀನು ಮಾರುಕಟ್ಟೆಯಲ್ಲಿ ಹಾಕಿದ್ದ ಚಪ್ಪರದ ಎರಡು ಮೂಲೆಗಳಲ್ಲಿ ವಾಸ್ತವ್ಯ ಹೂಡಿ ವಿವಾಹವನ್ನು ನೆರವೇರಿಸಿದರು.

ರಮಾಬಾಯಿ ಅವರು ಅಂಬೇಡ್ಕರ್ ಅವರ ದೊಡ್ಡ ಶಕ್ತಿಯಾಗಿದ್ದರು. ಪ್ರತಿ ಗಂಡಿನ ಯಶಸ್ಸಿನಲ್ಲಿ ಒಂದು ಹೆಣ್ಣಿನ ಪಾತ್ರ ಇರುತ್ತದೆ ಎನ್ನುವಂತೆಯೇ ರಮಾಬಾಯಿ ಅವರು ಅಂಬೇಡ್ಕರ್ ಅವರ ಪ್ರತಿ ಯಶಸ್ಸಿನ ಹಿಂದೆಯೂ ಇದ್ದರು. ಅಂಬೇಡ್ಕರ್ ಅವರ ಶಿಕ್ಷಣಕ್ಕೆ ಅವರ ತಂದೆ ರಾಮ್ ಜಿ ಸಕ್ಪಾಲ್ ಅವರು ಹೇಗೆ ಬೆಂಬಲ ನೀಡಿದರೋ ಹಾಗೆಯೇ ರಮಾಬಾಯಿ ಕೂಡ ಅಂಬೇಡ್ಕರ್ ಅವರ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟರು.

ನಾನು ಶಿಕ್ಷಣ ಪಡೆಯುವ ದಿನಗಳಲ್ಲಿ ಸುಖ, ಸಂತೋಷ, ನೆಮ್ಮದಿ ಯಾವುದರ ಬಗ್ಗೆಯೂ ತಾನು ತಲೆಕೆಡಿಸಿಕೊಳ್ಳದ ಸಮಯದಲ್ಲಿ, ಸಂಸಾರದ ನೋವು ಸ್ವಲ್ಪವೂ ತಿಳಿಯದಂತೆ ನನ್ನನ್ನು ಕಾಪಾಡಿದ್ದು  ರಮಾಬಾಯಿ ಎಂದು ತಮ್ಮ ಪ್ರೀತಿಯ ಪತ್ನಿಯ ಬಗ್ಗೆ ಅಂಬೇಡ್ಕರ್ ಅವರು  ತಮ್ಮ ಬಹಿಷ್ಕೃತ ಭಾರತ ಪತ್ರಿಕೆಯಲ್ಲಿ ಬರೆಯುತ್ತಾರೆ.

ಅಂಬೇಡ್ಕರ್ ಅವರ ಹಿಂದೆ ನಿಂತು ಅವರ ಪ್ರತಿ ಯಶಸ್ಸಿಗೂ ಬಲ ನೀಡುತ್ತಿದ್ದ ರಮಾಬಾಯಿ ಅವರು 1935ರ ಮೇ 7ರಂದು ನಿಧನರಾದರು. ಅವರ ನಿಧನವು ಅಂಬೇಡ್ಕರ್ ಅವರನ್ನು ತೀವ್ರವಾಗಿ ದುಃಖಕ್ಕೆ ದೂಡುತ್ತದೆ. ರಮಾ ಬಾಯಿ ಅವರ ಅಂತ್ಯಕ್ರಿಯೆಯ ಬಳಿಕ ಮನೆಗೆ ಬಂದ ಅಂಬೇಡ್ಕರ್ ಅವರು ತಮ್ಮ ಕೊಠಡಿಯೊಳಗೆ ಸೇರಿಕೊಂಡು ಬಿಕ್ಕಿಬಿಕ್ಕಿ ಅಳುತ್ತಾರೆ. ಒಂದು ವಾರಗಳ ಕಾಲ ನಿರಂತರವಾಗಿ ಅವರು ಕಣ್ಣೀರು ಹಾಕುತ್ತಾರೆಂದರೆ, ರಮಾಬಾಯಿ ಹಾಗೂ ಅಂಬೇಡ್ಕರ್ ಅವರ ಅನ್ಯೋನ್ಯತೆ ಎಷ್ಟಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಅಲ್ಲವೇ?

ಮಹಾನಾಯಕ ಡಾಟ್ ಇನ್ | ವಾಟ್ಸಾಪ್: 6363101317

ಇತ್ತೀಚಿನ ಸುದ್ದಿ