ರಾಜಸ್ಥಾನ ಚುನಾವಣೆ: ಬಿಜೆಪಿಯ 41 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ವಸುಂಧರಾ ರಾಜೇ ಹೆಸರು ನಾಪತ್ತೆ..!

ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಆದರೆ ಇದರಲ್ಲಿ ವಸುಂಧರಾ ರಾಜೆ ಅವರ ಹೆಸರು ಇಲ್ಲ. ಸಂಸದ ರಾಜ್ಯವರ್ಧನ್ ರಾಥೋಡ್ ಅವರಿಗೆ ಜೋತ್ವಾರಾ ಕ್ಷೇತ್ರದಿಂದ, ದಿಯಾ ಕುಮಾರಿಗೆ ವಿದ್ಯಾಧರ್ ನಗರ ಕ್ಷೇತ್ರದಿಂದ, ಬಾಬಾ ಬಾಲಕ್‌ನಾಥ್ ತಿಜಾರಾದಿಂದ, ಹಂಸರಾಜ್ ಮೀನಾ ಸಪೋತ್ರಾದಿಂದ ಮತ್ತು ಕಿರೋಡಿ ಲಾಲ್ ಮೀನಾ ಸವಾಯಿ ಮಾಧೋಪುರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಏಳು ಬಿಜೆಪಿ ಸಂಸದರಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೂಡ ಒಬ್ಬರು. ದಿಯಾ ಕುಮಾರಿ ಹಿಂದಿನ ಜೈಪುರ ರಾಜಮನೆತನದ ಸದಸ್ಯೆಯಾಗಿದ್ದಾರೆ.
ಸುಜನ್ ಗಢದಿಂದ ಸಂತೋಷ್ ಮೇಘವಾಲ್, ಬಸ್ಸಿಯಲ್ಲಿ ನಿವೃತ್ತ ಐಎಎಸ್ ಚಂದ್ರಮೋಹನ್ ಮೀನಾ, ಹಿಂದೌನ್ ನಿಂದ ರಾಜ್ಕುಮಾರಿ ಜಾತವ್ ಮತ್ತು ಬಾಗಿಡೋರಾದಿಂದ ಕೃಷ್ಣ ಕಟಾರಾ ಅವರ ಹೆಸರುಗಳು ಪಟ್ಟಿಯಲ್ಲಿವೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 1 ರಂದು ನಡೆದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ದೃಢಪಡಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಇನ್ನು ರಾಜಸ್ಥಾನ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿತ್ತು. ರಾಜಸ್ಥಾನದ ಎಲ್ಲಾ 200 ಸ್ಥಾನಗಳಿಗೆ ನವೆಂಬರ್ 23 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.