ಬಟ್ಟೆ ತೊಳೆದು ಬಸ್ ನಿಲ್ದಾಣದಲ್ಲಿ ಒಣಗಲು ಹಾಕಿದ ಮಹಿಳೆಯರು!: ಮಹಿಳಾ ಭಕ್ತದ ವರ್ತನೆಗೆ ಬಸ್ ಸಿಬ್ಬಂದಿ ಸುಸ್ತು! - Mahanayaka
10:21 AM Saturday 23 - August 2025

ಬಟ್ಟೆ ತೊಳೆದು ಬಸ್ ನಿಲ್ದಾಣದಲ್ಲಿ ಒಣಗಲು ಹಾಕಿದ ಮಹಿಳೆಯರು!: ಮಹಿಳಾ ಭಕ್ತದ ವರ್ತನೆಗೆ ಬಸ್ ಸಿಬ್ಬಂದಿ ಸುಸ್ತು!

chikkamagaluru
13/10/2023


Provided by

ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಸರ್ಕಾರಿ ಬಸ್ ನಿಲ್ದಾಣವನ್ನ ಮಹಿಳೆಯರು ಬಚ್ಚಲು ಮನೆ ಮಾಡ್ಕೊಂಡು ಬಟ್ಟೆ ಒಣಗಿಸುವ ತಾಣವನ್ನಾಗಿಸಿಕೊಂಡು ಬಟ್ಟೆ ಒಣಗಿಸಿಕೊಂಡು ಇಡೀ ದಿನ ಆರಾಮಾಗಿದ್ದಾರೆ.

ಶಕ್ತಿ ಯೋಜನೆಯಡಿ ಸರ್ಕಾರ ಮಹಿಳೆಯರಿಗೆ ಫ್ರೀ ಬಸ್ ಬಿಟ್ಟ ಮೇಲೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಒಮ್ಮೆಲೆ ಹತ್ತಾರು ಮಹಿಳೆಯರು ತಂಡ ಮಾಡ್ಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ದಾಂಗುಡಿ ಇಡ್ತಿದ್ದಾರೆ. ಅದು ಇನ್ನೂ ನಿಂತಿಲ್ಲ.  ಹೀಗೆ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಬರುವ ಮಹಿಳೆಯರು ಕೊಟ್ಟಿಗೆಹಾರದಲ್ಲಿ ಬಸ್ ಕಾಯುತ್ತಾ ಅಲ್ಲೇ ಬಟ್ಟೆ ತೊಳೆದುಕೊಂಡು ಬಸ್ ನಿಲ್ದಾಣದಲ್ಲೇ ಒಣಗಿಸಿಕೊಂಡು ಕಾಲ ಕಳೆಯುತ್ತಿದ್ದಾರೆ.

ರಾಜ್ಯದ ಯಾವುದೇ ಭಾಗದಿಂದ ಸರ್ಕಾರಿ ಬಸ್ಸಿನಲ್ಲಿ ಬಂದರೂ ಕೊಟ್ಟಿಗೆಹಾರದಲ್ಲಿ ಇಳಿಯಲೇಬೇಕು. ಫ್ರೀ ಬಸ್ಸಿನಲ್ಲಿ ಹೊರನಾಡಿಗೆ ಹೋಗಬೇಕಂದ್ರೆ ಕೊಟ್ಟಿಗೆಹಾರಕ್ಕೆ ಬಂದೇ ಹೋಗಬೇಕು. ಆದ್ರೆ, ಕೊಟ್ಟಿಗೆಹಾರದಿಂದ ಹೊರನಾಡಿಗೆ ಸರ್ಕಾರಿ ಬಸ್‍ಗಳ ಸಂಖ್ಯೆ ತೀರಾ ಕಡಿಮೆ. ದಿನಕ್ಕೆ ಹೆಚ್ಚೆಂದ್ರೆ ನಾಲ್ಕೈದು ಬಸ್ ಅಷ್ಟೆ ಸಂಚರಿಸೋದು. ಹಾಗಾಗಿ, ರಾಜ್ಯದ ನಾನಾ ಭಾಗಗಳಿಂದ ಬರುವ ಮಹಿಳೆಯರು ಫ್ರೀ ಬಸ್ ಕಾಯುತ್ತಾ ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಿ ಜಮಾಯಿಸಿರುತ್ತಾರೆ.

ಹೀಗೆ ಬಂದವರು, ಕೊಟ್ಟಿಗೆಹಾರದಲ್ಲಿ ನೀರಿನ ಸೌಲಭ್ಯ ಚೆನ್ನಾಗಿರೋದ್ರಿಂದ ಅಲ್ಲೇ ಬಟ್ಟೆ ತೊಳೆದು ಅಲ್ಲೇ ಒಣ ಹಾಕುತ್ತಿದ್ದಾರೆ. ಬಸ್ ನಿಲ್ಲುವ ಜಾಗದ ನೆಲದ ಮೇಲೂ ಬಟ್ಟೆ ಹಾಕುತ್ತಿದ್ದಾರೆ. ಬಸ್ ನಿಲ್ದಾಣದ ಕಾಂಪೌಂಡ್ ಮೇಲೂ ಬಟ್ಟೆ ಹಾಕುತ್ತಿದ್ದಾರೆ. ಕಾಂಪೌಂಡ್ ಮೇಲಿನ ತಂತಿ, ರಾಡನ್ನೂ ಬಿಟ್ಟಿಲ್ಲ. ಇಡೀ ದಿನ ಬಸ್ ಕಾಯುವ ಮಹಿಳೆಯರು ಕೊಟ್ಟಿಗೆಹಾರದ ಸರ್ಕಾರಿ ಬಸ್ ನಿಲ್ದಾಣವನ್ನೇ ಬಚ್ಚಲು ಮನೆ ಮಾಡ್ಕೊಂಡು ಬಟ್ಟೆ ತೊಳೆದುಕೊಂಡು, ಒಣಗಿಸಿಕೊಂಡು ಬಸ್ ಬಂದ ಕೂಡಲೇ ಅವಸರವಸವಾಗಿ ಬಟ್ಟೆಯನ್ನ ಬ್ಯಾಗಿಗೆ ತುಂಬಿಕೊಂಡು ಹೋಗುತ್ತಿದ್ದಾರೆ.

ಪ್ರಯಾಣಿಕರ ಈ ವರ್ತನೆಗೆ ಸ್ಥಳಿಯರು ಅಸಮಾಧಾನ ಹೊರಹಾಕಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳು ಕೂಡ ಮಹಿಳೆಯರಿಗೆ ತಿಳಿ ಹೇಳುತ್ತಿದ್ದಾರೆ. ಆದರೆ, ಉತ್ತರ ಕರ್ನಾಟಕದ ಮಹಿಳೆಯರು ಅಧಿಕಾರಿಗಳ ಅಥವಾ ಸ್ಥಳೀಯರ ಮಾತನ್ನ ಕೇಳುತ್ತಿಲ್ಲ. ಒಬ್ಬರಾದ ಮೇಲೊಬ್ಬರು ಬಟ್ಟೆ ತೊಳೆದು ಕಣ್ಣಿಗೆ ಕಂಡ ಜಾಗದಲ್ಲೆಲ್ಲಾ ಒಣ ಹಾಕುತ್ತಿದ್ದಾರೆ.

ಇತ್ತೀಚಿನ ಸುದ್ದಿ