ಇಸ್ರೇಲ್ ಪ್ರಧಾನಿಯನ್ನು ‘ದೆವ್ವ’ ಎಂದು ಕರೆದ ಅಸಾದುದ್ದೀನ್ ಒವೈಸಿ: ಗಾಝಾ ಜೊತೆ ನಿಲ್ಲುವಂತೆ ಪ್ರಧಾನಿ ಮೋದಿಗೆ ಮನವಿ

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಗಾಝಾ ಜನರೊಂದಿಗೆ ಒಗ್ಗಟ್ಟನ್ನು ತೋರಿಸುವಂತೆ ಮತ್ತು ಅವರಿಗೆ ಸಹಾಯ ಮಾಡುವಂತೆ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
“ನಾನು ಫೆಲೆಸ್ತೀನ್ ಪರವಾಗಿ ನಿಲ್ಲುತ್ತೇನೆ. ಇಂದಿಗೂ ಹೋರಾಡುತ್ತಿರುವ ಗಾಜಾದ ಧೈರ್ಯಶಾಲಿ ಪುರುಷರಿಗೆ ಲಕ್ಷಾಂತರ ನಮಸ್ಕಾರಗಳು. ಇಸ್ರೇಲ್ ಪ್ರಧಾನಿ ನೆತನ್ಯಾಹು ಒಬ್ಬ ದೆವ್ವ ಮತ್ತು ನಿರಂಕುಶಾಧಿಕಾರಿ ಮತ್ತು ಯುದ್ಧ ಅಪರಾಧಿ. ಫೆಲೆಸ್ತೀನ್ ಹೆಸರನ್ನು ತೆಗೆದುಕೊಳ್ಳುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ನಮ್ಮ ದೇಶದ ಬಾಬಾ ಮುಖ್ಯಮಂತ್ರಿಯೊಬ್ಬರು ಹೇಳಿದ್ದಾರೆ.
ಆದ್ದರಿಂದ ಕೇಳಿ ಬಾಬಾ ಮುಖ್ಯಮಂತ್ರಿಗಳೇ, ನಾನು ಹೆಮ್ಮೆಯಿಂದ ಫೆಲೆಸ್ತೀನ್ ಧ್ವಜ ಮತ್ತು ನಮ್ಮ ತ್ರಿವರ್ಣ ಧ್ವಜವನ್ನು ಧರಿಸುತ್ತಿದ್ದೇನೆ. ನಾನು ಫೆಲೆಸ್ತೀನ್ ಜೊತೆ ನಿಲ್ಲುತ್ತೇನೆ” ಎಂದು ಹೈದರಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಓವೈಸಿ ಹೇಳಿಕೆ ನೀಡಿದ್ದಾರೆ.
ಫೆಲೆಸ್ತೀನಿಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಲ್ಲಿಸುವಂತೆ ನಾನು ಪ್ರಧಾನಿಗೆ ಮನವಿ ಮಾಡಲು ಬಯಸುತ್ತೇನೆ. ಫೆಲೆಸ್ತೀನ್ ಕೇವಲ ಮುಸ್ಲಿಮರಿಗೆ ಸಂಬಂಧಿಸಿದ ವಿಷಯವಲ್ಲ. ಇದು ಮಾನವೀಯ ವಿಷಯವಾಗಿದೆ ಎಂದು ಅಸಾದುದ್ದೀನ್ ಹೇಳಿದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಇಸ್ರೇಲಿ ಪಡೆಗಳು ಮತ್ತು ಹಮಾಸ್ ಉಗ್ರಗಾಮಿ ಗುಂಪಿನ ನಡುವೆ “ತಕ್ಷಣದ ಕದನ ವಿರಾಮ” ಕ್ಕೆ ಕರೆ ನೀಡಿತ್ತು. “ಭೂಮಿ, ಸ್ವಯಮಾಡಳಿತ ಮತ್ತು ಘನತೆ ಮತ್ತು ಗೌರವದಿಂದ ಬದುಕುವ ಫೆಲೆಸ್ತೀನ್ ಜನರ ಹಕ್ಕುಗಳಿಗಾಗಿ” ದೀರ್ಘಕಾಲದ ಬೆಂಬಲವನ್ನು ಕಾಂಗ್ರೆಸ್ ನೀಡಿತ್ತು.