ದೇವರು ನಮಗೆ ಎರಡು ಆಯ್ಕೆ ಮಾತ್ರ ನೀಡಿದ್ದಾನೆ: ಡಿ.ಕೆ.ಶಿವಕುಮಾರ್ ಮಾರ್ಮಿಕ ನುಡಿ

ಬೆಂಗಳೂರು: ದೇವರು ನಮಗೆ ಎರಡು ಆಯ್ಕೆ ಮಾತ್ರ ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು ಮಾತ್ರ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ನುಡಿದರು.
ಕರ್ನಾಟಕ 50 ಸಂಭ್ರಮದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಡಿಕೆಶಿ, ಅಮ್ಮ ಕೊಟ್ಟಿರುವುದು ಜನ್ಮ. ದೇವರು ಕೊಟ್ಟಿರುವುದು ಬುದ್ಧಿ, ಗುರುಗಳು ಕೊಟ್ಟಿರುವುದು ವಿದ್ಯೆ, ಯಾರು ಕೊಡದೇ ನಮಗೆ ಸಿಕ್ಕಿರುವುದು ಕನ್ನಡ ನಾಡು. ಈ ನಾಡಿನಲ್ಲಿ ನಾವು ಉಸಿರಾಡುತ್ತಿದ್ದೇವೆಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ’ ಎಂದು ಹೇಳಿದ್ದಾರೆ. ಇಂದು ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದವರು ಕನ್ನಡದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರಕ್ಕೆ, ಸಚಿವ ಶಿವರಾಜ ತಂಗಡಗಿ ಅವರ ನೇತತ್ವದಲ್ಲಿ ಈ ಸಂಭ್ರಮಾಚರಣೆ ಮಾಡುವ ಅವಕಾಶ ಸಿಕ್ಕಿರುವುದೇ ನಮ್ಮ ಭಾಗ್ಯ ಎಂದರು.
ಇಡೀ ವರ್ಷ ಈ ಸಂಭ್ರಮಾಚರಣೆ ಮಾಡಬೇಕು ಎಂದು ನಾವು ನಿರ್ಧರಿಸಿದ್ದೇವೆ. ಇದು ಸರ್ಕಾರದ ಕಾರ್ಯಕ್ರಮದ ಜತೆಗೆ ಜನರ ಕಾರ್ಯಕ್ರಮವಾಗಬೇಕು. ಬೆಳಗಾವಿಯಿಂದ ಚಾಮರಾಜನಗರದವರೆಗೂ ಪ್ರತಿ ಹಳ್ಳಿಯಲ್ಲೂ ಯುವ ಪೀಳಿಗೆ ಈ ಸಂಭ್ರಮ ಆಚರಿಸಬೇಕು. ನವೆಂಬರ್ 1ರಿಂದ ಈ ಸಂಭ್ರಮಾಚರಣೆ ಮಾಡಲು ತೀರ್ಮಾನಿಸಲಾಗಿದ್ದು, ನಾವೆಲ್ಲರೂ ಬಹಳ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ದೀಪ ಬೆಳಗಿದ್ದೇವೆ. ಈ ಲಾಂಛನ ಮಾಡಿದ ಹುಡುಗನಿಗೆ ಸಚಿವರು 25 ಸಾವಿರ ಬಹುಮಾನ ಮೊತ್ತ ಘೋಷಿಸಿದ್ದಾರೆ. ಆದರೆ 25 ಸಾವಿರದ ಕಾಲ ಹೋಯಿತು. ಹೀಗಾಗಿ ಪಾಲಿಕೆ ವತಿಯಿಂದ ನಾನು 1 ಲಕ್ಷವನ್ನು ಬಹುಮಾನವಾಗಿ ನೀಡುತ್ತೇನೆ. ಯುವಕರಿಗೆ ನಾವು ಪ್ರೋತ್ಸಾಹ ನೀಡಬೇಕು ಎಂದು ಡಿಕೆಶಿ ಹೇಳಿದರು.