ವಿಕಲಚೇತನ ಯುವತಿ ಜೊತೆ ಸರ್ಕಾರಿ ಅಧಿಕಾರಿಗಳ ದರ್ಪ: "ಸ್ಸಾರಿ" ಕೇಳಿದ ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್ - Mahanayaka
10:26 AM Saturday 23 - August 2025

ವಿಕಲಚೇತನ ಯುವತಿ ಜೊತೆ ಸರ್ಕಾರಿ ಅಧಿಕಾರಿಗಳ ದರ್ಪ: “ಸ್ಸಾರಿ” ಕೇಳಿದ ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್

19/10/2023


Provided by

ರಿಜಿಸ್ಟರ್‌ ಮದುವೆಯಾಗಲು ವಿಕಲಚೇತನ ಯುವತಿಯೊಬ್ಬಳು ಎರಡಂತಸ್ತಿನ ಸರ್ಕಾರಿ ಕಟ್ಟಡವನ್ನು ಪ್ರಯಾಸಕರವಾಗಿ ಏರಿದ ಬಳಿಕ ಸರ್ಕಾರಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ವಿಕಲಚೇತನ ಹಕ್ಕುಗಳ ಕಾರ್ಯಕರ್ತೆ ವಿರಾಲಿ ಮೋದಿ ಎಂಬುವವರು ರಿಜಿಸ್ಟರ್ ಮದುವೆ ಹಿನ್ನೆಲೆಯಲ್ಲಿ ರಿಜಿಸ್ಟರ್ ಕಚೇರಿಗೆ ಹೋಗಿದ್ರು. ಆದ್ರೆ ಸಹಿ ಹಾಕಲು ಎರಡು ಅಂತಸ್ತಿನ ಮೇಲೆ ಬರಲು ಸಾಧ್ಯವಿಲ್ಲ. ಕಡತಗಳನ್ನು ತನ್ನ ಬಳಿಗೆ ತರುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ.
ಕಟ್ಟಡದಲ್ಲಿ ಲಿಫ್ಟ್‌ ಇಲ್ಲದ್ದರಿಂದ ಎರಡು ಅಂತಸ್ತಿನ ಕಚೇರಿಗೆ ತನ್ನನ್ನು ಹೊತ್ತುಕೊಂಡು ಹೋಗಬೇಕಾಯಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮದುವೆಯಾಗಲು ಕಚೇರಿಗೆ ಕರೆದೊಯ್ಯುತ್ತಿದ್ದಾಗ ಮೆಟ್ಟಿಲಿನಿಂದ ಬಿದ್ದಿದ್ದರೆ ಏನಾಗಬೇಕಿತ್ತು ಎಂದು ಆಕೆ ಪ್ರಶ್ನಿಸಿದ್ದಾರೆ.

“ಮೆಟ್ಟಿಲುಗಳು ಅತ್ಯಂತ ಕಡಿದಾಗಿದ್ದವು. ಹಿಡಿಕೆಗಳು ಸಡಿಲ ಮತ್ತು ತುಕ್ಕು ಹಿಡಿದಿದ್ದವು. ನಾನು ಮುಂಚಿತವಾಗಿ ನನ್ನ ಅಂಗವೈಕಲ್ಯವನ್ನು ತಿಳಿಸಿದ್ದರೂ ಸಹ ಯಾರೂ ಸಹಾಯ ಮಾಡಲು ಮುಂದಾಗಲಿಲ್ಲ. ನನಗೆ ಯಾವುದೇ ರೀತಿಯ ಸೌಕರ್ಯಗಳನ್ನು ಮಾಡಲಿಲ್ಲ” ಎಂದು ಅವರು ನೋವು ತೋಡಿಕೊಂಡಿದ್ದಾರೆ.

ನಾನು ಎರಡು ಮಹಡಿಗಳ ಮೇಲೆ ಹೊತ್ತು ಸಾಗಿಸಲು ನಾನೇನೂ ಸರಕಲ್ಲ. ನಾನು ಓರ್ವ ಮನುಷ್ಯೆ. ಇದು ನನ್ನ ಹಕ್ಕುಗಳ ವಿಷಯ ಎಂದು ಆಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

” ನಿಮ್ಮ ಹೊಸ ಆರಂಭಕ್ಕೆ ಅಭಿನಂದನೆಗಳು. ನಿಮ್ಮಿಬ್ಬರ ವೈವಾಹಿಕ ಜೀವನ ಸುಖಮಯ ಮತ್ತು ಸುಂದರವಾಗಿರಲಿ ಎಂದು ಹಾರೈಸುತ್ತೇನೆ. ಅಲ್ಲದೇ ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ನಾನು ವೈಯಕ್ತಿಕವಾಗಿ ಗಮನಹರಿಸಿದ್ದೇನೆ ಮತ್ತು ಸರಿಪಡಿಸುವ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ” ಎಂದು ಫಡ್ನವೀಸ್‌ ಯುವತಿಯ ಟ್ವೀಟ್‌ಗೆ ಉತ್ತರಿಸಿದ್ದಾರೆ.

ಇತ್ತೀಚಿನ ಸುದ್ದಿ