ಗಾಝಾ ಮೇಲೆ ವೈಮಾನಿಕ ದಾಳಿ: ಹಮಾಸ್ ಸೇನೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ಕೊಂದ ಇಸ್ರೇಲ್ ರಕ್ಷಣಾ ಪಡೆ

ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್)ಯು ತನ್ನ ದಾಳಿಯಲ್ಲಿ ಹಮಾಸ್ ಮಿಲಿಟರಿ ವಿಭಾಗದ ಇಬ್ಬರು ಹಿರಿಯ ನಾಯಕರನ್ನು ಕೊಂದಿದೆ ಎಂದು ಹೇಳಿಕೊಂಡಿದೆ.
ಈಗಾಗಲೇ ಸುಮಾರು 10 ಮಂದಿ ಉನ್ನತ ನಾಯಕರನ್ನು ಕಳೆದುಕೊಂಡಿರುವ ಬಂಡುಕೋರರ ಗುಂಪಿಗೆ ಇದು ಮತ್ತೊಂದು ಹಿನ್ನಡೆಯಾಗಿದೆ. ಇದಲ್ಲದೆ, ಕಳೆದ 24 ಗಂಟೆಗಳಲ್ಲಿ ಹಮಾಸ್ ಮತ್ತು ಫೆಲೆಸ್ತೀನ್ ಪಡೆಯು ಉಡಾವಣೆ ಮಾಡಿದ ಸುಮಾರು ಐದನೇ ಒಂದು ಭಾಗದಷ್ಟು ರಾಕೆಟ್ ಗಳು ಸ್ಫೋಟಗೊಂಡು ಗಾಝಾದೊಳಗೆ ಇಳಿದು ನಾಗರಿಕರಿಗೆ ಹಾನಿಯನ್ನುಂಟು ಮಾಡಿವೆ ಎಂದು ಇಸ್ರೇಲ್ ಡಿಫೆನ್ಸ್ ಫೋರ್ಸ್ ಆರೋಪಿಸಿದೆ. ಈ ಮಿಸ್ಫೈರ್ ಘಟನೆಯಲ್ಲಿ 550 ಕ್ಕೂ ಹೆಚ್ಚು ರಾಕೆಟ್ ಗಳು ಭಾಗಿಯಾಗಿದ್ದವು.
ಐಡಿಎಫ್ ವಕ್ತಾರ ಡೇನಿಯಲ್ ಹಗರಿ ಈ ಮಿಸ್ ಫೈರ್ ಸ್ಥಳೀಯ ಜನರಲ್ಲಿ ಸಾವುನೋವುಗಳಿಗೆ ಕಾರಣವಾಯಿತು ಎಂದು ಹೇಳಿದ್ದಾರೆ. ಗಾಝಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ಇಸ್ರೇಲ್ ರಾಕೆಟ್ ಹಾರಿಸಿದೆ ಎಂದು ಹಮಾಸ್ ಆರೋಪಿಸಿದ ಸ್ವಲ್ಪ ಸಮಯದ ನಂತರ ಈ ಮಾಹಿತಿ ಬಂದಿದೆ. ಆದಾಗ್ಯೂ, ಐಡಿಎಫ್ ಈ ಆರೋಪಗಳನ್ನು ನಿರಾಕರಿಸಿತ್ತು.
ಸಂಭಾವ್ಯ ನೆಲದ ಆಕ್ರಮಣದ ಸಿದ್ಧತೆಗಳ ಭಾಗವಾಗಿ ಇಸ್ರೇಲ್ ಡಿಫೆನ್ಸ್ ಫೋರ್ಸ್ ಉತ್ತರ ಗಾಝಾ ಪಟ್ಟಿಯಲ್ಲಿರುವ ಹಮಾಸ್ ಮಿಲಿಟರಿ ಪಡೆಯನ್ನು ಗುರಿಯಾಗಿಸಿಕೊಂಡಿದೆ.