ರಾಜಸ್ಥಾನ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

2023ರ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗ್ರ್ಯಾಂಡ್ ಓಲ್ಡ್ ಪಕ್ಷವು ಎರಡನೇ ಸುತ್ತಿನಲ್ಲಿ 43 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಖಜುವಾಲಾ ಕ್ಷೇತ್ರದಿಂದ ಗೋವಿಂದ್ ರಾಮ್ ಮೇಘವಾಲ್, ಸಿವಿಲ್ ಲೈನ್ಸ್ ಕ್ಷೇತ್ರದಿಂದ ಪ್ರತಾಪ್ ಸಿಂಗ್ ಖಚಾರಿಯಾವಾಸ್ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಅದೇ ಸಮಯದಲ್ಲಿ, ಪರ್ಸಾದಿ ಲಾಲ್ ಮೀನಾ ಅವರು ಲೋಲ್ಸೊಟ್ ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಕಾಂಗ್ರೆಸ್ ಪಕ್ಷವು ಶನಿವಾರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಸರ್ದಾರ್ಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಟೋಂಕ್ ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಸಚಿನ್ ಪೈಲಟ್ ಅವರ ಹೆಸರುಗಳು ಸೇರಿತ್ತು.
ಕಾಂಗ್ರೆಸ್ ಪಕ್ಷವು ದಿವ್ಯಾ ಮಡೆರ್ನಾ ಅವರನ್ನು ಒಸಿಯಾನ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದೆ. ಹಾಲಿ ಸಚಿವ ಅಶೋಕ್ ಚಂದ್ನಾ ಹಿಂಡೋಲಿಯಿಂದ ಮರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ವಿಶೇಷವೇನೆಂದರೆ, ರಾಜಸ್ಥಾನದ ಮಕ್ಕಳ ಸಬಲೀಕರಣ ಸಚಿವೆ ಮಮತಾ ಭೂಪೇಶ್ ಅವರು ಸಿಕ್ರೈ-ಎಸ್ಸಿ ಸ್ಥಾನದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿದ್ರೆ ಬಿಜೆಪಿ 73 ಸ್ಥಾನಗಳನ್ನು ಗೆದ್ದಿತ್ತು. ಬಿಎಸ್ಪಿ ಶಾಸಕರು ಮತ್ತು ಸ್ವತಂತ್ರ ಪ್ರತಿನಿಧಿಗಳ ಬೆಂಬಲದೊಂದಿಗೆ ಅಶೋಕ್ ಗೆಹ್ಲೋಟ್ ಅಧಿಕಾರ ವಹಿಸಿಕೊಂಡರು.
ಮಿಜೋರಾಂನಲ್ಲಿ ನವೆಂಬರ್ 7, ಛತ್ತೀಸ್ ಗಢದಲ್ಲಿ ನವೆಂಬರ್ 7 ಮತ್ತು 17, ಮಧ್ಯಪ್ರದೇಶದಲ್ಲಿ ನವೆಂಬರ್ 17, ರಾಜಸ್ಥಾನದಲ್ಲಿ ನವೆಂಬರ್ 25 ಮತ್ತು ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ. ಈ ಎಲ್ಲಾ ರಾಜ್ಯಗಳ ನಿರ್ಣಾಯಕ ಮತ ಎಣಿಕೆ ಪ್ರಕ್ರಿಯೆ ಡಿಸೆಂಬರ್ 3 ರಂದು ನಡೆಯಲಿದೆ.