ಹೊಲಕ್ಕೆ ನುಗ್ಗಿ ದಲಿತ ಮಹಿಳೆಗೆ ಲೈಂಗಿಕ ಕಿರುಕುಳ: ಬಿಜೆಪಿ ಎಂಎಲ್‌ಸಿಯ ಪತ್ನಿ ಸೇರಿದಂತೆ ಮೂವರ ವಿರುದ್ಧ ಕೇಸ್ ದಾಖಲು
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಬೀಡ್ ಎಂಬ ಜಿಲ್ಲೆಯಲ್ಲಿ 40 ವರ್ಷದ ಮಹಿಳೆಯನ್ನು ವಿವಸ್ತ್ರಗೊಳಿಸಿ ಮಾನಭಂಗ ಮಾಡಿದ ಘಟನೆ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್‌ಸಿಯ ಪತ್ನಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಐಪಿಸಿ ಸೆಕ್ಷನ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಂಎಲ್‌ಸಿ ಸುರೇಶ್ ಧಾಸ್ ಅವರ ಪತ್ನಿ ಪ್ರಜಕ್ತಾ ಧಾಸ್ ಅವರು ತಮ್ಮ ಸಹಚರರಾದ ರಾಹುಲ್ ಜಗದಾಳೆ ಮತ್ತು ರಾಘವ್ ಪವಾರ್ ಅವರೊಂದಿಗೆ ತಮ್ಮ ಪೂರ್ವಜರ ಜಮೀನನ್ನು ಬಲವಂತವಾಗಿ ಕಬಳಿಸಲು ಯತ್ನಿಸಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ.
ತಾನು ತನ್ನ ಗಂಡ ಮತ್ತು ಸೊಸೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಧಾಸ್ ತನ್ನಿಬ್ಬರು ಸಹಚರರೊಂದಿಗೆ ತಮ್ಮ ಹೊಲಕ್ಕೆ ನುಗ್ಗಿ, ಈ ಜಮೀನು ತನಗೆ ಸೇರಿದ್ದು ಎಂದು ಹೇಳಿದ್ದಾರೆ.
ಆದರೆ ಈ ಜಮೀನು 65 ವರ್ಷಗಳಿಂದ ಅದು ತಮ್ಮ ಕುಟುಂಬದ ವಶದಲ್ಲಿದೆ ಎಂದು ಹೇಳಿದಾಗ ಪ್ರಜಕ್ತಾ ಧಾಸ್ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಲು ಆದೇಶಿಸಿದ್ದಾರೆ. ಅದರಂತೆ ಜಗದಾಲಿ ಮತ್ತು ಪವಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಬಿಜೆಪಿ ಎಂಎಲ್‌ಸಿಯ ಪತ್ನಿಯ ಕೈವಾಡ ಇರುವುದರಿಂದ ರಾಜಕೀಯವಾಗಿಯೂ ಈ ಪ್ರಕರಣ ಗಮನ ಸೆಳೆದಿದೆ.


























