ಮುಖೇಶ್ ಅಂಬಾನಿಗೆ ಇಮೇಲ್ ನಲ್ಲಿ ಬಂತು ಜೀವ ಬೆದರಿಕೆ: ‘ನನಗೆ 20 ಕೋಟಿ ಅಲ್ಲ, 200 ಕೋಟಿ ಬೇಕು’ ಎಂದ ಅಪರಿಚಿತ ವ್ಯಕ್ತಿ..!

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಬಂದಿದೆ. 200 ಕೋಟಿ ನೀಡದಿದ್ದರೆ ಗುಂಡಿಕ್ಕಿ ಕೊಲ್ಲುವುದಾಗಿ ಇ-ಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ. “ಈಗ ನನಗೆ 20 ಕೋಟಿ ಅಲ್ಲ. 200 ಕೋಟಿ ಬೇಕು” ಎಂದು ಹೊಸ ಇ-ಮೇಲ್ ನಲ್ಲಿ ಬೇಡಿಕೆ ಇಡಲಾಗಿದೆ.
ಈ ಬಾರಿ ಮುಖೇಶ್ ಅಂಬಾನಿ ಅವರ ಇ-ಮೇಲ್ ಐಡಿಗೆ ಈ ಮುಂಚೆ ಬೆದರಿಕೆ ಮೇಲ್ ಮಾಡಿದ್ದ ಇಮೇಲ್ ಖಾತೆಯಿಂದ ಮತ್ತೊಂದು ಮೇಲ್ ಬಂದಿದೆ. ಅದರಲ್ಲಿ “ನೀವು ನಮ್ಮ ಇ-ಮೇಲ್ ಗೆ ಪ್ರತಿಕ್ರಿಯಿಸಿಲ್ಲ. ಈಗ ಮೊತ್ತವು 200 ಕೋಟಿ ರೂ. ಇಲ್ಲದಿದ್ದರೆ ಡೆತ್ ವಾರಂಟ್ ಗೆ ಸಹಿ ಹಾಕಲಾಗಿದೆ” ಎಂದು ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ಪೊಲೀಸರ ಪ್ರಕಾರ ಈ ಹಿಂದಿನ ಇಮೇಲ್ (ಅಕ್ಟೋಬರ್ 27) ಹೀಗಿತ್ತು. “ನೀವು ನಮಗೆ 20 ಕೋಟಿ ನೀಡದಿದ್ರೆ ನಾವು ನಿಮ್ಮನ್ನು ಕೊಲ್ಲುತ್ತೇವೆ. ನಾವು ಭಾರತದ ಅತ್ಯುತ್ತಮ ಶೂಟರ್ ಗಳನ್ನು ಹೊಂದಿದ್ದೇವೆ” ಎಂದು ಬೆದರಿಸಲಾಗಿತ್ತು.
ಇಮೇಲ್ ಸ್ವೀಕರಿಸಿದ ನಂತರ ಮುಖೇಶ್ ಅಂಬಾನಿ ಅವರ ಭದ್ರತಾ ಉಸ್ತುವಾರಿ ನೀಡಿದ ದೂರಿನ ಆಧಾರದ ಮೇಲೆ ಮುಂಬೈನ ಗಾಮ್ದೇವಿ ಪೊಲೀಸರು ಐಪಿಸಿಯ ಸೆಕ್ಷನ್ 387 ಮತ್ತು 506 (2) ರ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಮುಖೇಶ್ ಅಂಬಾನಿ ಅವರು 2023 ರ ಫೋರ್ಬ್ಸ್ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಭಾರತದ 100 ಶ್ರೀಮಂತರ ಒಟ್ಟು ಸಂಪತ್ತು ಈ ವರ್ಷ 799 ಬಿಲಿಯನ್ ಡಾಲರ್ ಆಗಿದೆ.