ಸ್ಟ್ರೆಚರ್ ನಲ್ಲೇ ಮಲಗಿ ಪ್ರಾಣ ಬಿಟ್ಟ ಬಿಜೆಪಿ ಸಂಸದನ ಪುತ್ರ: ಹೀಗಿದೆ ನೋಡಿ ಆಸ್ಪತ್ರೆಗಳ ದುರಾವಸ್ಥೆ! - Mahanayaka

ಸ್ಟ್ರೆಚರ್ ನಲ್ಲೇ ಮಲಗಿ ಪ್ರಾಣ ಬಿಟ್ಟ ಬಿಜೆಪಿ ಸಂಸದನ ಪುತ್ರ: ಹೀಗಿದೆ ನೋಡಿ ಆಸ್ಪತ್ರೆಗಳ ದುರಾವಸ್ಥೆ!

bhairon prasad mishra
31/10/2023


Provided by

ಉತ್ತರಪ್ರದೇಶ: ಹಾಸಿಗೆಗಳ ಕೊರತೆಯಿಂದಾಗಿ ಬಿಜೆಪಿಯ ಮಾಜಿ ಸಂಸದರೊಬ್ಬರ ಪುತ್ರ ಸ್ಟ್ರೆಚರ್ ನಲ್ಲೇ ಮಲಗಿ ಪ್ರಾಣ ಬಿಟ್ಟ ಘಟನೆ ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್’ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ನಡೆದಿದೆ.

ಬಿಜೆಪಿ ಮಾಜಿ ಸಂಸದ ಭೈರೋ ಪ್ರಸಾದ್ ಮಿಶ್ರಾ ಅವರ ಪುತ್ರ ಪ್ರಕಾಶ್ ಮಿಶ್ರಾ ಮೃತಪಟ್ಟವರಾಗಿದ್ದಾರೆ.  ಶನಿವಾರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್ ಮಿಶ್ರಾನನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆತರಲಾಗಿತ್ತು. ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು.

ಈ ವೇಳೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹಾಸಿಗೆಗಳ ಕೊರತೆಯ ನೆಪ ಹೇಳಿ ಸ್ಟ್ರೆಚರ್ ನಲ್ಲೇ ಮಲಗಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ, ಯಾವುದೇ ವೈದ್ಯಕೀಯ ಸೌಕರ್ಯವೂ ಇಲ್ಲದೇ ಕಾಟಾಚಾರಕ್ಕೆ ಚಿಕಿತ್ಸೆ ನೀಡಲಾಗಿದೆ. ಇದಾಗಿ ಒಂದು ಗಂಟೆಯ ಬಳಿಕ ಪ್ರಕಾಶ್ ಮಿಶ್ರಾ ಸ್ಟ್ರೆಚರ್ ನಲ್ಲೇ ಪ್ರಾಣ ಬಿಟ್ಟಿದ್ದಾರೆ.

2014ರಲ್ಲಿ ಬಿಜೆಪಿಯಿಂದ ಬಂಡಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭೈರೋ ಪ್ರಸಾದ್ ಮಿಶ್ರಾ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಒಬ್ಬ ಜನ ಪ್ರತಿನಿಧಿಯ ಪುತ್ರನಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಕ್ಕಿಲ್ಲವಾದರೆ, ಜನಸಾಮಾನ್ಯರನ್ನ ಆಸ್ಪತ್ರೆ ಸಿಬ್ಬಂದಿ ಎಷ್ಟೊಂದು ಸತಾಯಿಸುತ್ತಿರಬಹುದು ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಉತ್ತರ ಪ್ರದೇಶವು ವೈದ್ಯಕೀಯ ವೈಫಲ್ಯಕ್ಕೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.

ಇತ್ತೀಚಿನ ಸುದ್ದಿ