ಪಾಕಿಸ್ತಾನದ ಮಿಯಾನ್ವಾಲಿ ವಾಯುನೆಲೆ ಮೇಲೆ ಉಗ್ರರ ದಾಳಿ: ಮೂವರನ್ನು ಹೊಡೆದುರುಳಿಸಿದ ಪಾಕ್ ಸೇನೆ

ಪಾಕಿಸ್ತಾನದ ಪಂಜಾಬ್ ನ ಮಿಯಾನ್ವಾಲಿಯಲ್ಲಿರುವ ಪಾಕಿಸ್ತಾನ ವಾಯುಪಡೆಯ ನೆಲೆಯ ಮೇಲೆ ಶನಿವಾರ ಆತ್ಮಹತ್ಯಾ ಬಾಂಬರ್ ಗಳು ದಾಳಿ ನಡೆಸಿದ್ದಾರೆ. ಪ್ರತೀಕಾರದ ಗುಂಡಿನ ದಾಳಿಯಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ವಾಯುಪಡೆ (ಪಿಎಎಫ್) ತಿಳಿಸಿದೆ.
ಭಾರೀ ಶಸ್ತ್ರಸಜ್ಜಿತವಾಗಿ ಬಂದ ಐದರಿಂದ ಆರು ಜನರ ಗುಂಪು ಮುಂಜಾನೆ ಈ ದಾಳಿಯನ್ನು ಪ್ರಾರಂಭಿಸಿತು. ಇದು ಗುಂಡಿನ ಚಕಮಕಿಗೆ ಕಾರಣವಾಯಿತು. ದಾಳಿಯನ್ನು ದೃಢಪಡಿಸಿದ ಪಿಎಎಫ್, ಭಯೋತ್ಪಾದಕರು ವಾಯುನೆಲೆಯನ್ನು ಪ್ರವೇಶಿಸುವ ಮೊದಲು ದಾಳಿಯನ್ನು ವಿಫಲಗೊಳಿಸಿದ್ದೇವೆ ಎಂದು ಹೇಳಿದೆ.
ಪಾಕಿಸ್ತಾನ ವಾಯುಪಡೆಯ ಮಿಯಾನ್ವಾಲಿ ತರಬೇತಿ ವಾಯುನೆಲೆಯಲ್ಲಿ ವಿಫಲ ಭಯೋತ್ಪಾದಕ ದಾಳಿ ನಡೆಯಿತು. ಸೇನಾ ಸಿಬ್ಬಂದಿ ಮತ್ತು ಸ್ವತ್ತುಗಳ ಸುರಕ್ಷತೆ ಮತ್ತು ಭದ್ರತೆಯನ್ನು ಸೇನೆಯು ಖಚಿತಪಡಿಸುತ್ತದೆ. ಅಸಾಧಾರಣ ಧೈರ್ಯ ಮತ್ತು ಸಮಯೋಚಿತ ಪ್ರತಿಕ್ರಿಯೆಯನ್ನು ಪ್ರದರ್ಶಿಸಿ ಮೂವರು ಭಯೋತ್ಪಾದಕರು ನೆಲೆಯನ್ನು ಪ್ರವೇಶಿಸುವ ಮೊದಲೇ ತಟಸ್ಥಗೊಳಿಸಲಾಯಿತು. ಉಳಿದ 3 ಭಯೋತ್ಪಾದಕರನ್ನು ಸೈನಿಕರ ಸಮಯೋಚಿತ ಮತ್ತು ಪರಿಣಾಮಕಾರಿ ದಾಳಿಯಿಂದ ಕೊಲ್ಲಲಾಯಿತು ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ದಾಳಿಯಲ್ಲಿ ವಾಯುಪಡೆಯ ನೆಲೆಯೊಳಗೆ ನಿಲ್ಲಿಸಿದ್ದ ಮೂರು ವಿಮಾನಗಳು ಹಾನಿಗೊಳಗಾಗಿವೆ ಮತ್ತು ಇಂಧನ ಬೌಸರ್ ಗೆ ಸಹ ಹಾನಿ ಸಂಭವಿಸಿದೆ ಎಂದು ಸೇನೆ ತಿಳಿಸಿದೆ.
ಈ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸಮಗ್ರ ಜಂಟಿ ತೆರವು ಮತ್ತು ಕೂಂಬಿಂಗ್ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ ಎಂದು ಪಾಕಿಸ್ತಾನ ಸೇನೆಯ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ತಿಳಿಸಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ತೆಹ್ರೀಕ್-ಇ-ಜಿಹಾದ್ ಪಾಕಿಸ್ತಾನ್ (ಟಿಜೆಪಿ) ಈ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇನ್ನು ಈ ದಾಳಿಯ ದೃಢೀಕರಿಸದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗುತ್ತಿದೆ.