ಕ್ರೂರ ಕೃತ್ಯ: ಗಾಝಾದ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾ ಮೇಲೆ ಇಸ್ರೇಲ್ ಪಡೆಗಳಿಂದ ಗುಂಡಿನ ದಾಳಿ; ಆಸ್ಪತ್ರೆಯೊಳಗೆ ಮಕ್ಕಳ ಪರದಾಟ

ಗಾಝಾದ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾ ಆಸ್ಪತ್ರೆಯ ಅಡಿಯಲ್ಲಿ ಹಮಾಸ್ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ ಎಂದು ಇಸ್ರೇಲ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು ಈಗ ಈ ಆಸ್ಪತ್ರೆಯನ್ನು ಸುತ್ತುವರೆದಿವೆ. ಗಾಜಾದ ಅತಿದೊಡ್ಡ ಆಸ್ಪತ್ರೆ ಈಗ ಇಸ್ರೇಲ್ ಸೈನಿಕರಿಂದ ದಾಳಿಗೆ ಒಳಗಾಗಿದೆ. ಆಮ್ಲಜನಕದ ಕೊರತೆಯಿಂದಾಗಿ ನವಜಾತ ಶಿಶುಗಳ ವಾರ್ಡ್ ನಲ್ಲಿ ಕನಿಷ್ಠ ಮೂರು ಶಿಶುಗಳು ಸಾವನ್ನಪ್ಪಿವೆ ಎಂದು ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯ ತಿಳಿಸಿದೆ.
ಹಮಾಸ್ ತನ್ನ ಮಿಲಿಟರಿ ಚಟುವಟಿಕೆಗಳಿಗೆ ಗಾಜಾ ಆಸ್ಪತ್ರೆಗಳು ಮತ್ತು ಇತರ ನಾಗರಿಕ ಮೂಲಸೌಕರ್ಯಗಳನ್ನು ಗುರಾಣಿಗಳಾಗಿ ಬಳಸುತ್ತದೆ ಎಂದು ಇಸ್ರೇಲ್ ನಿರಂತರವಾಗಿ ಆರೋಪಿಸಿದೆ.
ಗಾಝಾ ಆರೋಗ್ಯ ಸಚಿವಾಲಯದ ವಕ್ತಾರ ಡಾ.ಅಶ್ರಫ್ ಅಲ್-ಖಿದ್ರಾ ಕೂಡ ಅಲ್-ಶಿಫಾ ಸಂಕೀರ್ಣದೊಳಗೆ ಸಿಕ್ಕಿಬಿದ್ದಿದ್ದಾರೆ. “ತೀವ್ರ ನಿಗಾ ಘಟಕ, ಮಕ್ಕಳ ವಿಭಾಗ ಮತ್ತು ಆಮ್ಲಜನಕ ಸಾಧನಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ” ಎಂದು ಅವರು ಹೇಳಿದ್ದಾರೆ.
ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಡಾ.ಮುನೀರ್ ಅಲ್-ಬುರ್ಶ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 36 ಶಿಶುಗಳಿಗೆ ವೈದ್ಯರು ಕೈಯಿಂದ ಕೃತಕ ಉಸಿರಾಟವನ್ನು ನಡೆಸುವಂತೆ ಹೇಳಲಾಗಿದೆ ಎಂದು ಹೇಳಿದ್ದಾರೆ. ಆಸ್ಪತ್ರೆಯನ್ನು ಎಲ್ಲಾ ದಿಕ್ಕುಗಳಿಂದ ಇಸ್ರೇಲ್ ಸುತ್ತುವರೆದಿದೆ ಮತ್ತು ನಿರಂತರವಾಗಿ ದಾಳಿಗೆ ಒಳಗಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಆಸ್ಪತ್ರೆಯಲ್ಲಿ ಸುಮಾರು 400 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಸುಮಾರು 20,000 ಜನರು ಆಸ್ಪತ್ರೆ ಸಂಕೀರ್ಣದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಇತ್ತ ಇಸ್ರೇಲ್ ಗಾಝಾ ಆಸ್ಪತ್ರೆಯ ಮುತ್ತಿಗೆಯ ವರದಿಗಳನ್ನು ನಿರಾಕರಿಸಿದ್ದು, ಈ ಹೇಳಿಕೆಗಳನ್ನು ‘ತಪ್ಪು ಮಾಹಿತಿ’ ಎಂದು ಕರೆದಿದೆ. “ಶಿಫಾ ಆಸ್ಪತ್ರೆಗೆ ಯಾವುದೇ ಮುತ್ತಿಗೆ ಇಲ್ಲ. ಆಸ್ಪತ್ರೆಯಿಂದ ಹೊರಹೋಗಲು ಬಯಸುವ ಗಾಝಾನ್ನರ ಸುರಕ್ಷಿತ ಪ್ರಯಾಣಕ್ಕಾಗಿ ಆಸ್ಪತ್ರೆಯ ಪೂರ್ವ ಭಾಗವು ಅಲ್-ವೆಹ್ಡಾ ಸ್ಟ್ರೀಟ್‌ನಲ್ಲಿ ತೆರೆದಿದೆ. ನಾವು ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ನೇರವಾಗಿ ಮತ್ತು ನಿಯಮಿತವಾಗಿ ಮಾತನಾಡುತ್ತಿದ್ದೇವೆ. ಶಿಫಾ ಆಸ್ಪತ್ರೆಯ ಸಿಬ್ಬಂದಿ ಮಕ್ಕಳ ವಿಭಾಗದಲ್ಲಿನ ಶಿಶುಗಳನ್ನು ಸುರಕ್ಷಿತ ಆಸ್ಪತ್ರೆಗೆ ಹೋಗಲು ಸಹಾಯ ಮಾಡಬೇಕೆಂದು ವಿನಂತಿಸಿದ್ದಾರೆ. ನಾವು ಅಗತ್ಯವಿರುವ ಸಹಾಯವನ್ನು ಒದಗಿಸುತ್ತೇವೆ” ಎಂದು ಐಡಿಎಫ್ ವಕ್ತಾರ ಆರ್ ಡಿಎಂ ಹೇಳಿದ್ದಾರೆ.
ಈ ಮಧ್ಯೆ, ಕಳೆದ ದಿನ ನಡೆದ ದಾಳಿಗೆ ಪ್ರತಿಕ್ರಿಯೆಯಾಗಿ ತನ್ನ ಫೈಟರ್ ಜೆಟ್ ಗಳು ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಭಯೋತ್ಪಾದಕ ಮೂಲಸೌಕರ್ಯ ಮತ್ತು ಮಿಲಿಟರಿ ಪೋಸ್ಟ್ ಗಳ ಮೇಲೆ ದಾಳಿ ನಡೆಸಿವೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ. ಇದಲ್ಲದೆ, ಹಿಜ್ಬುಲ್ಲಾ ಬಂಡುಕೋರರ ಸೆಲ್ ಇಂದು ಮುಂಜಾನೆ ಲೆಬನಾನ್ ನಿಂದ ಉತ್ತರ ಇಸ್ರೇಲ್ ಕಡೆಗೆ ಹಲವಾರು ರಾಕೆಟ್ ಗಳನ್ನು ಉಡಾಯಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಐಡಿಎಫ್ ವಿಮಾನವು ಭಯೋತ್ಪಾದಕ ಸೆಲ್ ಮತ್ತು ಉಡಾವಣಾ ಪ್ಯಾಡ್ ಮೇಲೆ ದಾಳಿ ನಡೆಸಿತು” ಎಂದು ಅದು ಹೇಳಿದೆ.