ಒಡಿಶಾದಲ್ಲಿ ವಿದ್ಯಾರ್ಥಿಗೆ ಬಿಸಿಲಿನಲ್ಲೇ ಕೂರುವ ಶಿಕ್ಷೆ ನೀಡಿದ ಶಿಕ್ಷಕ: ಬಿಸಿಲ ತಾಪಕ್ಕೆ ವಿದ್ಯಾರ್ಥಿ ಸಾವು

ಒಡಿಶಾದ ಜಜ್ಪುರ್ ಜಿಲ್ಲೆಯ ಸರ್ಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕನೊಬ್ಬ ಬಲವಂತವಾಗಿ ಬಿಸಿಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತ ರುದ್ರ ನಾರಾಯಣ ಸೇಥಿ, ಓರಾಲಿಯ ಸೂರ್ಯ ನಾರಾಯಣ್ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ.
ಹತ್ತು ವರ್ಷದ ಈ ವಿದ್ಯಾರ್ಥಿ ಮಧ್ಯಾಹ್ನ 3 ಗಂಟೆಗೆ ತರಗತಿಯ ಸಮಯದಲ್ಲಿ ಶಾಲಾ ಆವರಣದಲ್ಲಿ ಸಹ ವಿದ್ಯಾರ್ಥಿಗಳೊಂದಿಗೆ ಆಟವಾಡುತ್ತಿರುವುದು ಕಂಡುಬಂದಿದೆ. ಶಿಕ್ಷಕಿಯೊಬ್ಬರು ಇದನ್ನು ನೋಡಿದ್ದಾರೆ. ಇದಕ್ಕೆ ಶಿಕ್ಷೆಯಾಗಿ ಬಿಸಿಲಿನಲ್ಲಿ ಕುಳಿತುಕೊಳ್ಳುವಂತೆ ಆದೇಶಿಸಿದ್ದಾರೆ.
ಇದೇ ವೇಳೆ ವಿದ್ಯಾರ್ಥಿ ರುದ್ರ ಕುಸಿದು ಬಿದ್ದಿದ್ದಾನೆ. ಈತನನ್ನು
ಶಿಕ್ಷಕರು ಹತ್ತಿರದ ಸಮುದಾಯ ಕೇಂದ್ರಕ್ಕೆ ಕರೆದೊಯ್ದರು ಮತ್ತು ಅಲ್ಲಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ಅಂತಿಮವಾಗಿ ಕಟಕ್ ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ರಸೂಲ್ಪುರ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ನೀಲಾಂಬರ್ ಮಿಶ್ರಾ ಅವರನ್ನು ಸಂಪರ್ಕಿಸಿದಾಗ, ಅವರು ಇಲ್ಲಿಯವರೆಗೆ ಯಾವುದೇ ಅಧಿಕೃತ ದೂರು ಸ್ವೀಕರಿಸಿಲ್ಲ ಎಂದು ಹೇಳಿದರು.
“ನಮಗೆ ಔಪಚಾರಿಕ ದೂರು ಬಂದರೆ ನಾವು ತನಿಖೆಯನ್ನು ಪ್ರಾರಂಭಿಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದರು.
ರಸೂಲ್ಪುರ ಸಹಾಯಕ ಬ್ಲಾಕ್ ಶಿಕ್ಷಣ ಅಧಿಕಾರಿ ಪ್ರವಂಜನ್ ಪತಿ ಶಾಲೆಗೆ ಭೇಟಿ ನೀಡಿ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.