ದುರಂತ: ನೋಯ್ಡಾದಲ್ಲಿ ಕಾರಿಗೆ ಬೆಂಕಿ; ಇಬ್ಬರು ಸಜೀವ ದಹನ

ನೋಯ್ಡಾದ ಸೆಕ್ಟರ್ 119 ಪ್ರದೇಶದ ಸೊಸೈಟಿಯೊಂದರಲ್ಲಿ ಶನಿವಾರ ಕಾರಿಗೆ ಬೆಂಕಿ ತಗುಲಿ ಇಬ್ಬರು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ನಂತರ ಶವಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಗುರುತಿಸುವಿಕೆಗಾಗಿ ವಿಧಿವಿಜ್ಞಾನ ತಂಡಕ್ಕೆ ಕಳುಹಿಸಲಾಯಿತು. ನೋಯ್ಡಾದ ಅಮ್ರಪಾಲಿ ಪ್ಲಾಟಿನಂನಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಬೆಳಿಗ್ಗೆ 6.08 ಕ್ಕೆ ಸೊಸೈಟಿ ಬಳಿ ಬಂದ ಕಾರಿಗೆ ಬೆಳಿಗ್ಗೆ 6:11 ಕ್ಕೆ ಬೆಂಕಿ ಹೊತ್ತಿಕೊಂಡಿತು. ನಿವಾಸಿಗಳು ತಪ್ಪಿಸಿಕೊಳ್ಳಲು ಅವಕಾಶವಿರದೇ ದುರಂತಕ್ಕೆ ಬಲಿಯಾದರು.
ಘಟನೆಯ ಬಗ್ಗೆ ಮಾತನಾಡಿದ ನೋಯ್ಡಾ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಶಕ್ತಿ ಅವಸ್ಥಿ, ಸೆಕ್ಟರ್ 119 ರಲ್ಲಿರುವ ಅಮ್ರಪಾಲಿ ಪ್ಲಾಟಿನಂ ಸೊಸೈಟಿ ಬಳಿ ಬಿಳಿ ಸ್ವಿಫ್ಟ್ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಹೇಳಿದರು.
ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಎಡಿಸಿಪಿ ಶಕ್ತಿ ಅವಸ್ಥಿ ಸುದ್ದಿಗಾರರಿಗೆ ತಿಳಿಸಿದ್ದಾರೆ.