ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಕಾಡಾನೆ ಸಾವು! - Mahanayaka

ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಕಾಡಾನೆ ಸಾವು!

chikkamagaluru
03/12/2023


Provided by

ಚಿಕ್ಕಮಗಳೂರು: ಸೆರೆಯಾದ ಕಾಡಾನೆ ಸಾವನ್ನಪ್ಪಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಕನಗದ್ದೆ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಆನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಈ ಭಾಗದಲ್ಲಿ ಮೂರು ಕಾಡಾನೆಗಳನ್ನು ಸೆರೆಹಿಡಿದು ಸಾಗಿಸಲು ಸರ್ಕಾರದ ಆದೇಶದ ಮೇರೆಗೆ ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ನಿನ್ನೆ ರಾತ್ರಿ ಮೇಕನಗದ್ದೆ ಗ್ರಾಮದ ಸಮೀಪ ಕಾಡಾನೆ ಕಾಣಿಸಿಕೊಂಡಿದ್ದು, ಅರವಳಿಗೆ ಚುಚ್ಚುಮದ್ದು ಹಾಕಲಾಗಿತ್ತು ಎಂದು ತಿಳಿದುಬಂದಿದೆ.

ಅರವಳಿಕೆ ಚುಚ್ಚುಮದ್ದು ಹಾಕಿದ ನಂತರ ಆನೆಯ ಜಾಡು ಹಿಡಿದು ಹೋದಾಗ ಸ್ವಲ್ಪದೂರದಲ್ಲಿಯೇ ಕಾಡಾನೆ ಮೃತಪಟ್ಟು ಬಿದ್ದಿದ್ದು ಕಂಡುಬಂದಿದೆ.

ಶನಿವಾರ ರಾತ್ರಿ ಸುಮಾರು 11-30 ರ ವೇಳೆಗೆ ಈ ಘಟನೆ ನಡೆದಿದೆ. ಇತ್ತೀಚೆಗೆ ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ತಿಕ್ ಗೌಡ ಅವರನ್ನು ಕಾಡಾನೆಯೊಂದು ತುಳಿದು ಸಾಯಿಸಿದ್ದ ದೊಡ್ಡಗೊಳ್ಳ ಎಂಬ ಸ್ಥಳದ ಸಮೀಪದಲ್ಲಿಯೇ ಕಾಡಾನೆ ಸತ್ತು ಬಿದ್ದಿದೆ ಎಂದು ತಿಳಿದುಬಂದಿದೆ.

ಸಾವನ್ನಪ್ಪಿರುವ ಆನೆ ಒಂಟಿಗೊಂಬಿನ ಆನೆಯಾಗಿದೆ. ಇದು ಅನೇಕ ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿತ್ತು ಎಂದು ತಿಳಿಬಂದಿದೆ.

ಆನೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಇತ್ತೀಚಿನ ಸುದ್ದಿ