ಶಿವಸೇನೆಯ ನಾಯಕನ ಮೇಲೆ ಪೊಲೀಸ್ ಠಾಣೆಯಲ್ಲೇ ಗುಂಡು ಹಾರಿಸಿದ ಮಹಾರಾಷ್ಟ್ರದ ಬಿಜೆಪಿ ಶಾಸಕ

ಶಿವಸೇನೆಯ ಮುಖಂಡ ಮಹೇಶ್ ಗಾಯಕ್ವಾಡ್ ಅವರ ಮೇಲೆ ಬಿಜೆಪಿ ಶಾಸಕ ಗಣೇಶ್ ಗಾಯಕ್ವಾಡ್ ಎಂಬುವವರು ಶುಕ್ರವಾರ ತಡರಾತ್ರಿ ಮಹಾರಾಷ್ಟ್ರದ ಉಲ್ಹಾಸ್ನಗರದಲ್ಲಿ ಗುಂಡಿಕ್ಕಿದ್ದಾರೆ ಎಂದು ಆರೋಪಿಸಲಾಗಿದೆ.
ಹಿಲ್ ಲೈನ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯ ಕ್ಯಾಬಿನ್ ಒಳಗೆ ಈ ಗುಂಡಿನ ದಾಳಿ ನಡೆದಿದ್ದು, ಇಬ್ಬರು ರಾಜಕಾರಣಿಗಳು ಮತ್ತು ಅವರ ಬೆಂಬಲಿಗರು ದೀರ್ಘಕಾಲದ ಭೂ ವಿವಾದದ ಬಗ್ಗೆ ದೂರು ನೀಡಲು ಜಮಾಯಿಸಿದ್ದರು. ಇದೇ ವೇಳೆ ಎರಡೂ ಕಡೆಗಳ ನಡುವೆ ವಾಗ್ವಾದ ನಡೆದಿತ್ತು. ಗಣೇಶ್ ಗಾಯಕ್ವಾಡ್ ಮಹೇಶ್ ಗಾಯಕ್ವಾಡ್ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದರು ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಘಟನೆಯಲ್ಲಿ ಶಿವಸೇನೆ ಶಾಸಕ ರಾಹುಲ್ ಪಾಟೀಲ್ ಕೂಡ ಗಾಯಗೊಂಡಿದ್ದಾರೆ.
ಇಬ್ಬರೂ ಶಿವಸೇನೆ ನಾಯಕರು ಪ್ರಸ್ತುತ ಥಾಣೆಯ ಜುಪಿಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏತನ್ಮಧ್ಯೆ, ಗಣಪತ್ ಗಾಯಕ್ವಾಡ್ ಅವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅವರು ಬಳಸಿದ ಬಂದೂಕನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಹೇಶ್ ಗಾಯಕ್ವಾಡ್ ಅವರನ್ನು ಆರಂಭದಲ್ಲಿ ಉಲ್ಹಾಸ್ ನಗರದ ಮೀರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ, ಅವರ ಸ್ಥಿತಿ ಗಂಭೀರವಾದ ನಂತರ, ಅವರನ್ನು ರಾತ್ರಿ 11 ಗಂಟೆ ಸುಮಾರಿಗೆ ಥಾಣೆಯ ಜುಪಿಟರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಶಿವಸೇನೆ ನಾಯಕನ ಬೆಂಬಲಿಗರು ಜುಪಿಟರ್ ಆಸ್ಪತ್ರೆಯಲ್ಲಿ ಜಮಾಯಿಸಿದ್ದು, ನಗರದಲ್ಲಿ ಉದ್ವಿಗ್ನತೆ ಕಾಣಿಸಿಕೊಂಡಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನೆ (ಯುಬಿಟಿ) ವಕ್ತಾರ ಆನಂದ್ ದುಬೆ, “ಮಹಾರಾಷ್ಟ್ರವನ್ನು ಜಂಗಲ್ ರಾಜ್ ಆಗಿ ಪರಿವರ್ತಿಸಲಾಗುತ್ತಿದೆ” ಎಂದು ದೂರಿದ್ದಾರೆ.