ಇಬ್ಬರ ಜಗಳ ಬಿಡಿಸಲು ಹೋದ ಸ್ನೇಹಿತನ ಬರ್ಬರ ಹತ್ಯೆ!

ಕಲಬುರಗಿ: ಸ್ನೇಹಿತರ ಜಗಳ ಬಿಡಿಸಲು ಹೋದ ವ್ಯಕ್ತಿ ತನ್ನ ಸ್ನೇಹಿತರಿಂದಲೇ ಬರ್ಬರವಾಗಿ ಹತ್ಯೆಗೀಡಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ನಡೆದಿದೆ.
ಶಿವಕುಮಾರ್ ಗಾರಲೋರ (25) ಹತ್ಯೆಗೀಡಾದ ವ್ಯಕ್ತಿಯಾಗಿದ್ದಾರೆ. ಇವರ ಸ್ನೇಹಿತರಾದ ಚಂದ್ರಕಾಂತ ಮತ್ತು ಬಸವರಾಜ್ ಹತ್ಯೆ ಮಾಡಿದ ಆರೋಪಿಗಳಾಗಿದ್ದಾರೆ.
ಶಿವಕುಮಾರ್, ಚಂದ್ರಕಾಂತ ಮತ್ತು ಬಸವರಾಜ್ ಸ್ನೇಹಿತರಾಗಿದ್ದರು. ಚಂದ್ರಕಾಂತ ಹಾಗೂ ಬಸವರಾಜ್ ಮಧ್ಯೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಆರಂಭವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ದೊಣ್ಣೆಯಲ್ಲಿ ಹೊಡೆದುಕೊಳ್ಳಲು ಆರಂಭಿಸಿದ್ದರು. ಇವರಿಬ್ಬರ ಜಗಳ ತಾರಕಕ್ಕೇರಿದಾಗ ಶಿವಕುಮಾರ್ ಮಧ್ಯಪ್ರವೇಶಿಸಿದ್ದು, ಜಗಳ ಬಿಡಿಸಲು ಮುಂದಾಗಿದ್ದಾನೆ.
ಇತ್ತ ಜಗಳ ಬಿಡಿಸಲು ಹೋದ ಶಿವಕುಮಾರ್ ವಿರುದ್ಧವೇ ಇಬ್ಬರು ಸ್ನೇಹಿತರು ತಿರುಗಿ ಬಿದ್ದಿದ್ದು, ಶಿವಕುಮಾರ್ ಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.