ಗಬ್ಬೆದ್ದು ನಾರುತ್ತಿರುವ ರಸ್ತೆಯಲ್ಲೇ ಹಾರ ಬದಲಿಸಿಕೊಂಡ ಜೋಡಿ: ಕಾರಣ ಕೇಳಿದ್ರೆ ಬೆರಗಾಗುತ್ತೀರಿ

ಆಗ್ರಾ: ಗಬ್ಬೆದ್ದು ನಾರುತ್ತಿರುವ ರಸ್ತೆಯಲ್ಲೇ ದಂಪತಿ ಹಾರ ಬದಲಿಸಿಕೊಂಡು ತಮ್ಮ 17ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ.
ಭಗವಾನ್ ಶರ್ಮಾ ಹಾಗೂ ಉಷಾದೇವಿ ಕೊಳಕು ನೀರು ತುಂಬಿದ್ದ ರಸ್ತೆಯಲ್ಲೇ ನಿಂತು ಮದುವೆಯಾಗಿದ್ದಾರೆ. ಗಬ್ಬು ನಾರುತ್ತಿರುವ ಚರಂಡಿ ಮತ್ತು ಕಸದ ನಡುವೆಯೇ ದಂಪತಿ ಹಾರ ಬದಲಿಸಿಕೊಂಡರು.
15 ವರ್ಷಗಳಿಂದ ಈ ಪ್ರದೇಶದಲ್ಲಿ ಕೊಳಕು ನಾರುತ್ತಿದೆ. ರಸ್ತೆಗಳೆಲ್ಲ ಗಬ್ಬೆದ್ದು ಹೋಗಿವೆ. ಇಲ್ಲಿನ ಸ್ಥಳೀಯಾಡಳಿತ ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ಹೀಗಾಗಿ ದಂಪತಿ ಸ್ಥಳೀಯಾಡಳಿತದ ಗಮನ ಸೆಳೆಯಲು ಕೊಳಕು ತುಂಬಿದ ಈ ರಸ್ತೆಯಲ್ಲೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.
ಲಕ್ಷದ್ವೀಪ ಅಥವಾ ಮಾಲ್ಡೀವ್ಸ್ನಲ್ಲಿ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕೆಂದು ದಂಪತಿ ನಿರ್ಧರಿಸಿದ್ದರು. ಆದ್ರೆ, ಸ್ಥಳೀಯಾಡಳಿತದ ಉದಾಸೀನದ ವರ್ತನೆಯಿಂದ ಬೇಸತ್ತು ಹೋಗಿ, ಇಲ್ಲಿಯೇ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸ್ಥಳೀಯ ಅಧಿಕಾರಿಗಳು ರಸ್ತೆಯನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.