ಕೇರಳದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು: ಕರ್ನಾಟಕ ಸರ್ಕಾರದಿಂದ ಪರಿಹಾರ!
ಬೆಂಗಳೂರು: ಕರ್ನಾಟಕದ ಕಾಡಿನ ಆನೆಯೊಂದು ಕೇರಳದ ವಯನಾಡ್ ಗೆ ನುಗ್ಗಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ್ದು, ಇದೀಗ ಸಾವನ್ನಪ್ಪಿರುವ ಕೇರಳದ ವ್ಯಕ್ತಿಗೆ ಪರಿಹಾರ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಆನೆ ದಾಳಿಯಿಂದ ಮೃತಪಟ್ಟ ಕರ್ನಾಟಕದ ಜನರಿಗೆ ನೀಡುವ ಪರಿಹಾರಕ್ಕೆ ಸಮನಾದ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
2023ರ ನವೆಂಬರ್ 30ರಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕಾಡಾನೆಯನ್ನು ಸೆರೆಹಿಡಿದು ಬಂಡೀಪುರ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಎರಡು ತಿಂಗಳ ನಂತರ, ಅದು ಕೇರಳದ ವಯನಾಡ್ ಜಿಲ್ಲೆಗೆ ದಾರಿ ತಪ್ಪಿ ಹೋಗಿತ್ತು. ಅಲ್ಲಿ ಫೆಬ್ರವರಿ 10ರಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಕೇರಳ ಸರ್ಕಾರವು ಕರ್ನಾಟಕ ಸರ್ಕಾರವನ್ನು ವಿಶಾಲ ಹೃದಯದಿಂದ ಆ ಪ್ರಕರಣಕ್ಕೆ ಪರಿಹಾರ ನೀಡುವಂತೆ ವಿನಂತಿಸಿದೆ ಎಂದು ಸಚಿವರ ಕಚೇರಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಮೃತ ಅಜೀಶ್ ಕುಟುಂಬಕ್ಕೆ ಕರ್ನಾಟಕದ ಯಾವುದೇ ವ್ಯಕ್ತಿಗೆ ಸಮಾನವಾಗಿ ಪರಿಹಾರ ನೀಡಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.




























