ಗಡ್ಡ, ಬರ್ಖಾ ತೊಟ್ಟವರು ನನ್ನ ಬಳಿ ಬರಬೇಡಿ ಅಂದ ನಿಮಗೆ ಅಲ್ಪಸಂಖ್ಯಾತರ ಅನುದಾನ ಯಾಕೆ: ಯತ್ನಾಳ್ ಗೆ ಜಮೀರ್ ಪ್ರಶ್ನೆ

ಬೆಂಗಳೂರು: ಹಿಂದುತ್ವದ ಹೆಸರಿನಲ್ಲಿ ಪದೇ ಪದೇ ಮುಸ್ಲಿಮರ ವಿರುದ್ಧ ಹೇಳಿಕೆ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಚಿವ ಜಮೀರ್ ಅಹ್ಮದ್ ತರಾಟೆಗೆತ್ತಿಕೊಂಡ ಘಟನೆ ವಿಧಾನಸಭೆಯಲ್ಲಿ ನಡೆಯಿತು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಅವರು ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ ಅನುದಾನದ ಬಗ್ಗೆ ವಸತಿ ಸಚಿವರನ್ನು ಪ್ರಶ್ನಿಸಿದರು.
ಈ ಚರ್ಚೆಯ ನಡುವೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರ ಕ್ಷೇತ್ರದಲ್ಲಿ 1.2 ಲಕ್ಷ ಮುಸ್ಲಿಮರಿದ್ದರೂ ಹಣ ಬಿಡುಗಡೆ ಮಾಡಿಲ್ಲ ಎಂದರು.
ನಿಮಗೆ ಅನುದಾನ ನೀಡಬೇಕೇ? ನಿಮಗೆ ಅನುದಾನ ಏಕೆ ಬೇಕು? ಶಾಸಕರಾದ ನಂತರ ನೀವು ಬುರ್ಖಾ ಧರಿಸಿದ ಮಹಿಳೆಯರು ಮತ್ತು ಗಡ್ಡ ಬಿಟ್ಟವರು ನನ್ನ ಹತ್ತಿರ ಬರಬಾರದು ಎಂದು ಹೇಳಿದ್ದೀರಿ ಎಂದು ಜಮೀರ್ ಅಹಮದ್ ಖಾನ್ ತಿರುಗೇಟು ನೀಡಿದರು.
ಮುಸ್ಲಿಮರಿಗಾಗಿ ನೀವೂ ಏನನ್ನೂ ಮಾಡುವುದಿಲ್ಲ. ನಿಮಗೆ ಅನುದಾನ ನೀಡುವುದು ಹೇಗೆ? ಎಂದು ಯತ್ನಾಳ್ ಅವರನ್ನು ಸಚಿವ ಜಮೀರ್ ಅಹ್ಮದ್ ಪ್ರಶ್ನಿಸಿದರು.
ಇನ್ನೂ ಜಮೀರ್ ಅಹ್ಮದ್ ಅವರ ಪ್ರತಿಕ್ರಿಯೆಗೆ ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವರಾಗಿದ್ದುಕೊಂಡು ಜಮೀರ್ ಈ ರೀತಿಯ ಉತ್ತರ ನೀಡಬಾರದಿತ್ತು ಎಂದರು.
ರಾಜಕೀಯ ಪ್ರಶ್ನೆಗಳಿಗೆ ವಿಧಾನಸಭೆಯ ಹೊರಗೆ ರಾಜಕೀಯ ರೀತಿಯಲ್ಲಿ ಉತ್ತರಿಸಬೇಕು. ಸದನದೊಳಗೆ ಈ ರೀತಿ ಉತ್ತರಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಲಹೆ ನೀಡಿದರು.
ಇನ್ನೂ ಸದನದ ಒಳಗೆ ಮುಸ್ಲಿಮರ ಬಗ್ಗೆ ಪ್ರೀತಿ, ಹೊರಗೆ ದ್ವೇಷ ತೋರಿಸುವ ಬಿಜೆಪಿ ನಾಯಕರ ಇಬ್ಬಗೆ ನೀತಿ ಇದೀಗ ಸಾರ್ವಜನಿಕರ ನಡುವೆ ಚರ್ಚೆಗಳಿಗೆ ಕಾರಣವಾಗಿದೆ.