ಪ್ರೇಮಿಗಳ ದಿನಾಚರಣೆಯಂದು ಮೂವರು ಬಾಲಕಿಯರ ಮೇಲೆ ಅತ್ಯಾಚಾರ!

ಬೆಳಗಾವಿ: ಪ್ರೇಮಿಗಳ ದಿನಾಚರಣೆಯಂದು ಮೂವರು ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ನಡೆಸಿರುವ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ.
ರಾಯಬಾಗ ತಾಲೂಕಿನ ಗ್ರಾಮದ ನಿವಾಸಿಗಳಾದ ಅದ್ಧೂರಿ ಅಲಿಯಾಸ್ ಹಾಲಪ್ಪ ಸುರೇಶ ಬಬಲೇಶ್ವರ, ಹಾಲಪ್ಪ ಗಿಡ್ಡವ್ವಗೋಳ ಮತ್ತು ಗೋಪಾಲ್ ಗಾಡಿವಡ್ಡರ್ ಕೃತ್ಯ ಎಸಗಿದ ಆರೋಪಿಗಳು ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೇವಸ್ಥಾನಕ್ಕೆ ತೆರಳುತ್ತಿದ್ದ ಬಾಲಕಿಯರನ್ನು ಕಾರಿನಲ್ಲಿ ಹಿಂಬಾಲಿಸಿದ ಆರೋಪಿಗಳು ಬಳಿಕ ಬಾಲಕಿಯರನ್ನು ಕಾರಿನಲ್ಲಿ ಕೂರಿಸಿಕೊಂಡು ಮುಗಳಖೋಡ ಗ್ರಾಮದ ತೋಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ.
ಕೃತ್ಯದ ನಂತರ ಸಂತ್ರಸ್ತೆಯರನ್ನು ದೇವಸ್ಥಾನದ ಬಳಿ ಬಿಟ್ಟು, ಪೊಲೀಸರಿಗೆ ಅಥವಾ ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಘಟನೆ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಗಳು ಸ್ಥಳದಿಂದ ತೆರಳಿದ ಬಳಿಕ ಸಂತ್ರಸ್ತರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿಕೊಂಡ ರಾಯಬಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.