ರೈಲಿನಲ್ಲೇ 22 ವರ್ಷದ ಯುವಕನಿಗೆ ಇರಿದ ಪಾಪಿ! | ರೈಲಿನ ಬಾಗಿಲು ಮುಚ್ಚಿದ ವಿಚಾರ ದುರಂತ ಅಂತ್ಯ
ಮುಂಬೈ: ಚಲಿಸುತ್ತಿದ್ದ ಮುಂಬೈ ಲೋಕಲ್ ರೈಲಿನಲ್ಲಿ ರೈಲಿನ ಬಾಗಿಲು ಮುಚ್ಚುವ ವಿಚಾರವಾಗಿ ನಡೆದ ಸಣ್ಣ ಜಗಳವೊಂದು ವಿಕೋಪಕ್ಕೆ ತಿರುಗಿ, 22 ವರ್ಷದ ಯುವಕನೊಬ್ಬನನ್ನು ಚಾಕು ಇರಿದು ಭೀಕರವಾಗಿ ಕೊಲೆ ಮಾಡಲಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೃತ ಯುವಕನನ್ನು ಮಯಾಂಕ್ ಲೋಹರ್ (22) ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ಮುಂಬೈನಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಈ ವೇಳೆ ಮಯಾಂಕ್ ಲೋಹರ್ ಚರ್ಚ್ಗೇಟ್ನಿಂದ ನಲ್ಲಸೋಪಾರಾಗೆ ಹೋಗುತ್ತಿದ್ದ ಫಾಸ್ಟ್ ಲೋಕಲ್ ರೈಲಿನ ಫಸ್ಟ್ ಕ್ಲಾಸ್ (ಮೊದಲ ದರ್ಜೆ) ಬೋಗಿಯಲ್ಲಿ ಪ್ರಯಾಣಿಸುತ್ತಿದ್ದನು. ಅಂಧೇರಿ ಮತ್ತು ಬೊರಿವಲಿ ನಿಲ್ದಾಣಗಳ ನಡುವೆ ರೈಲು ಚಲಿಸುತ್ತಿದ್ದಾಗ, ಮಳೆಯ ನೀರು ಒಳಗೆ ಬರದಂತೆ ತಡೆಯಲು ಬೋಗಿಯ ಬಾಗಿಲು ಮುಚ್ಚುವ ವಿಚಾರವಾಗಿ ಮಯಾಂಕ್ ಮತ್ತು ಇನ್ನೊಬ್ಬ ಪ್ರಯಾಣಿಕನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಜಗಳ ತಾರಕಕ್ಕೇರಿದಾಗ, ಆರೋಪಿ ಪ್ರಯಾಣಿಕನು ಮಯಾಂಕ್ನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ರಾತ್ರಿ ಸುಮಾರು 11.04 ಕ್ಕೆ ರೈಲು ಬೊರಿವಲಿ ನಿಲ್ದಾಣವನ್ನು ತಲುಪುತ್ತಿದ್ದಂತೆ, ರೈಲು ಸಂಪೂರ್ಣವಾಗಿ ನಿಲ್ಲುವ ಮೊದಲೇ ಆರೋಪಿ ಅಲ್ಲಿಂದ ಓಡಿಹೋಗಿ ತಲೆಮರೆಸಿಕೊಂಡಿದ್ದಾನೆ.
ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಮಾಹಿತಿ ಪಡೆದ ರೈಲ್ವೆ ರಕ್ಷಣಾ ಪಡೆ (RPF) ಮತ್ತು ಸರ್ಕಾರಿ ರೈಲ್ವೆ ಪೊಲೀಸ್ (GRP) ಸಿಬ್ಬಂದಿ ತಕ್ಷಣವೇ ಬೋಗಿಗೆ ಧಾವಿಸಿದ್ದಾರೆ. ಅಲ್ಲಿ ತೀವ್ರವಾಗಿ ರಕ್ತಸ್ರಾವವಾಗಿ ಗಾಯಗೊಂಡಿದ್ದ ಮಯಾಂಕ್ ನನ್ನು ಸ್ಟ್ರೆಚರ್ ಮೂಲಕ ಬೊರಿವಲಿ ನಿಲ್ದಾಣದ ತುರ್ತು ಚಿಕಿತ್ಸಾ ಕೊಠಡಿಗೆ ಕೊಂಡೊಯ್ಯಲಾಯಿತು. ನಂತರ ಅಲ್ಲಿಂದ ಕಾಂದಿವಲಿಯ ಶತಾಬ್ದಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ.
“ಗಾಯಗೊಂಡಿದ್ದ ಪ್ರಯಾಣಿಕನಿಗೆ ತಕ್ಷಣ ವೈದ್ಯಕೀಯ ನೆರವು ನೀಡುವುದು ನಮ್ಮ ಮೊದಲ ಆದ್ಯತೆಯಾಗಿತ್ತು” ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೀತ್ ಅಭಿಷೇಕ್ ತಿಳಿಸಿದ್ದಾರೆ. ರೈಲ್ವೆ ಪೊಲೀಸರು ಘಟನೆ ನಡೆದ ಬೋಗಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಇತರ ಪುರಾವೆಗಳನ್ನು ಸಂಗ್ರಹಿಸಿದ್ದು, ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದಾರೆ.
ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಾಗಿ ಜಿಆರ್ ಪಿ (GRP) ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಘಟನೆಯ ಸಮಯದಲ್ಲಿ ಬೋಗಿಯಲ್ಲಿದ್ದ ಇತರೆ ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























