ಮೂವರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ; ಕೇಸ್ ಸೆಟ್ಲುಮೆಂಟ್ ಗೆ ಒಪ್ಪದ ಯುವಕನ ಮೇಲೆ ಹಲ್ಲೆ!
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬಿಸ್ಲೆರೆ ಗ್ರಾಮದಲ್ಲಿ ಅತ್ಯಂತ ಅಮಾನವೀಯ ಹಾಗೂ ಇಡೀ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯ ಕಾಮುಕ ಶಿಕ್ಷಕನೊಬ್ಬ ಮೂವರು ಪುಟ್ಟ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದ್ದು, ಈ ಸೂಕ್ಷ್ಮ ಪ್ರಕರಣವನ್ನು ಕಾನೂನು ಬಾಹಿರವಾಗಿ ‘ಸೆಟ್ಲುಮೆಂಟ್’ (ರಾಜಿ) ಮಾಡಲು ಯತ್ನಿಸಿದ ಘಟನೆ ನಡೆದಿದೆ. ಅಷ್ಟೇ ಅಲ್ಲದೆ, “ಕಾನೂನು ಕ್ರಮವಾಗಲಿ, ಸೆಟ್ಲುಮೆಂಟ್ ಬೇಡ” ಎಂದು ಧ್ವನಿ ಎತ್ತಿದ ಯುವಕನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಆರೋಪವೂ ಕೇಳಿಬಂದಿದೆ.
ಬಿಸ್ಲೆರೆ ಗ್ರಾಮದ ಶಾಲೆಯೊಂದರ ಶಿಕ್ಷಕನು ತನ್ನದೇ ಶಾಲೆಯ ಮೂವರು ಹೆಣ್ಣು ಮಕ್ಕಳಿಗೆ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ವಿಕೃತವಾಗಿ ನಡೆದುಕೊಂಡಿದ್ದಲ್ಲದೆ ವಿಚಿತ್ರ ಪ್ರಶ್ನೆಗಳನ್ನು ಕೇಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿಷಯ ತಿಳಿದ ಗ್ರಾಮಸ್ಥರು ಶಿಕ್ಷಕನ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮಕ್ಕಳ ಕಲ್ಯಾಣ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ (BEO), ಸ್ಥಳೀಯ ಪೊಲೀಸರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಪದಾಧಿಕಾರಿಗಳು ಜಂಟಿ ಸಭೆ ನಡೆಸಿ ಮುಂದಿನ ಕ್ರಮದ ಕುರಿತು ತೀರ್ಮಾನ ಕೈಗೊಳ್ಳಲು ಮುಂದಾಗಿದ್ದಾರೆ.
ಈ ಮಧ್ಯೆ, ಮಕ್ಕಳ ಮೇಲಿನ ಇಂತಹ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಪೊಲೀಸರಿಗೆ ತಿಳಿಸದೇ ಒಳಗೊಳಗೇ ಮುಚ್ಚಿಹಾಕಲು ಸಂಚು ರೂಪಿಸಲಾಗಿತ್ತು. ನಂದೀಶ್ ಎಂಬಾತ “ಪೊಲೀಸ್ ಕಾನೂನು ಕ್ರಮ ಬೇಡ, ಇಲ್ಲೇ ಗ್ರಾಮದಲ್ಲೇ ಇತ್ಯರ್ಥ (ಸೆಟ್ಲುಮೆಂಟ್) ಮಾಡಿಕೊಳ್ಳೋಣ” ಎಂದು ಹಠ ಹಿಡಿದಿದ್ದ ಎನ್ನಲಾಗಿದೆ.
ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಗ್ರಾಮದ ತಿಪ್ಪೇಶ್ ಎಂಬ ಯುವಕ, “ಮಕ್ಕಳಿಗೆ ಅನ್ಯಾಯವಾಗಿದೆ, ಯಾವುದೇ ಕಾರಣಕ್ಕೂ ರಾಜಿ ಸಂಧಾನ ಇಲ್ಲ. ಕಾಮುಕ ಶಿಕ್ಷಕನಿಗೆ ಕಾನೂನು ಪ್ರಕಾರವೇ ಶಿಕ್ಷೆಯಾಗಬೇಕು” ಎಂದು ಪಟ್ಟು ಹಿಡಿದಿದ್ದಾನೆ. ಇದರಿಂದ ಆಕ್ರೋಶಗೊಂಡ ನಂದೀಶ್, ರಾಜಿ ಸಂಧಾನಕ್ಕೆ ಒಪ್ಪದ ತಿಪ್ಪೇಶ್ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ತಿಪ್ಪೇಶ್ ಸದ್ಯ ಕಡೂರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























