ಸೋದರಸೊಸೆಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ ದಲಿತ ವ್ಯಕ್ತಿಯ ಬರ್ಬರ ಹತ್ಯೆ: ಆಕ್ರೋಶಿತ ಜನರಿಂದ ಆರೋಪಿಯ ಮನೆಗೆ ಬೆಂಕಿ
ಲಕ್ನೋ: ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ಬಖೀರಾ ಪ್ರದೇಶದಲ್ಲಿ ೨೯ ವರ್ಷದ ದಲಿತ ಯುವಕನೊಬ್ಬನನ್ನು ಚೂಪಾದ ಆಯುಧದಿಂದ ಗಂಟಲು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಮೃತನ ಶವವನ್ನಿಟ್ಟು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಲ್ಲದೆ, ಮುಖ್ಯ ಆರೋಪಿಯ ಮನೆಗೆ ಬೆಂಕಿ ಹಚ್ಚಿದ ಘಟನೆ ಶುಕ್ರವಾರ ನಡೆದಿದೆ.
ಆನಂದ್ ಕುಮಾರ್ (29) ಕೊಲೆಯಾದ ದುರ್ದೈವಿ. ಈತ ಟೈಲ್ಸ್ ಅಳವಡಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ನಾಸಿರ್ ಅಲಿ ಸೇರಿದಂತೆ ಮೂವರ ವಿರುದ್ಧ ಬಖೀರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 10 ದಿನಗಳ ಹಿಂದೆ ನಡೆದಿದ್ದ ಸಮಾರಂಭವೊಂದರಲ್ಲಿ ಈ ಗಲಾಟೆಗೆ ಮುನ್ನುಡಿ ಬರೆಯಲಾಗಿತ್ತು. ಮುಖ್ಯ ಆರೋಪಿ ನಾಸಿರ್ ಅಲಿ ತನಗೆ ಕಿರುಕುಳ ನೀಡಿದ್ದಾನೆ ಎಂದು ಆನಂದ್ ಕುಮಾರ್ ಅವರ ಸೋದರಸೊಸೆ ದೂರು ನೀಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆನಂದ್ ಕುಮಾರ್, ನಾಸಿರ್ ಅಲಿಯನ್ನು ಪ್ರಶ್ನಿಸಿ ಆತನಿಗೆ ಥಳಿಸಿದ್ದರು ಎನ್ನಲಾಗಿದೆ. ಇದೇ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿಗಳು, ಗುರುವಾರ ಆನಂದ್ ಕುಮಾರ್ ಮನೆಗೆ ಮರಳುತ್ತಿದ್ದಾಗ ಬಭ್ನಿ ಕ್ರಾಸ್ ಬಳಿ ಅಡ್ಡಗಟ್ಟಿ ಚೂಪಾದ ಆಯುಧದಿಂದ ಗಂಟಲು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆನಂದ್ ಅವರ ಶವವನ್ನು ರಸ್ತೆಯ ಮೇಲಿಟ್ಟು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಇದೇ ವೇಳೆ ಉದ್ರಿಕ್ತರಾದ ಪ್ರತಿಭಟನಾಕಾರರು ಮುಖ್ಯ ಆರೋಪಿ ನಾಸಿರ್ ಅಲಿಯ ಮನೆಗೆ ಬೆಂಕಿ ಹಚ್ಚಿದ್ದಾರೆ. ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಮತ್ತು ಅವರ ಮನೆಗಳನ್ನು ಧ್ವಂಸಗೊಳಿಸಬೇಕು ಎಂದು ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಗಿದ್ದು, ಶವಸಂಸ್ಕಾರ ನೆರವೇರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮೃತ ಆನಂದ್ ಕುಮಾರ್ ಅವರಿಗೆ ಪತ್ನಿ ಮತ್ತು ಮೂರು ತಿಂಗಳ ಮಗು ಸೇರಿದಂತೆ ಇಬ್ಬರು ಸಣ್ಣ ಮಕ್ಕಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























