ಬಿಜೆಪಿಯ ಹೊಸ ಪ್ರಚಾರ ತಂತ್ರ: ʼನೋ ಮೈಕ್ ನೋ ಚೇರ್ಸ್ʼ | ಬಿಎಸ್ ಪಿಯ ತಂತ್ರಗಾರಿಕೆಯನ್ನ ಕಾಪಿ ಮಾಡಿತಾ ಬಿಜೆಪಿ?

ಬೆಂಗಳೂರು: ಲೋಕಸಭಾ ಚುನಾವಣೆಗೆ ಟಿಕೆಟ್ ಸಮರವೊಂದೆಡೆ ಮುಂದುವರಿಯುತ್ತಿದೆ. ಇನ್ನೊಂದೆಡೆ ಲೋಕ ಗೆಲ್ಲಲು ರಾಜಕೀಯ ಪಕ್ಷಗಳು ಪ್ರಚಾರ ತಂತ್ರಗಾರಿಕೆ ಹೆಣೆದಿವೆ. ಈ ಪೈಕಿ ಬಿಜೆಪಿ ಈ ಬಾರಿ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಲಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಬಿಜೆಪಿ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ತಳಮಟ್ಟದಲ್ಲಿ ಜನರನ್ನು ತಲುಪುವ ಉದ್ದೇಶದೊಂದಿಗೆ ಈ ಬಾರಿ ʼನೋ ಮೈಕ್, ನೋ ಚೇರ್ಸ್ʼ ಅಭಿಯಾನವನ್ನು ಹಮ್ಮಿಕೊಂಡಿದೆ.
ಸಣ್ಣಪುಟ್ಟ ಹಳ್ಳಿಗಳಿಗೆ ತೆರಳಿ ಮರದ ಕೆಳಗೆ ಅಥವಾ ಮನೆಗಳಿಗೆ ತೆರಳಿ ಪ್ರಚಾರ ನಡೆಸಲು ಬಿಜೆಪಿ ತಂತ್ರಗಾರಿಕೆ ಹೆಣೆದಿದೆ. ಒಂದು ಬಾರಿ ಸಭೆ ನಡೆಸುವ ವೇಳೆ ನೂರಾರು ಜನರನ್ನು ತಲುಪುವ ಟಾರ್ಗೆಟ್ ಇಟ್ಟುಕೊಂಡಿದೆ ಎಂದು ವರದಿಯಾಗಿದೆ.
ದೊಡ್ಡ ಪ್ರಚಾರ ಸಭೆಗಳನ್ನು ನಡೆಸುವ ಬದಲು, ಸಣ್ಣಪುಟ್ಟ ಸಭೆಗಳನ್ನು ನಡೆಸುವ ಮೂಲಕ ಜನರನ್ನು ಮನವೊಲಿಸಲು ಅನುಕೂಲವಾಗುತ್ತದೆ, ಮತದಾರ ಮತ್ತು ಪಕ್ಷದ ಕಾರ್ಯಕರ್ತರ ನಡುವೆ ನೇರ ಸಂವಹನದ ಮೂಲಕ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ಪಡೆಯಬಹುದು ಎನ್ನುವುದು ಬಿಜೆಪಿಯ ಲೆಕ್ಕಚಾರವಾಗಿದೆ.
ಸಣ್ಣಮಟ್ಟದ ಸ್ಥಳೀಯ ಪ್ರಚಾರಗಳಲ್ಲಿ ರೈತರು, ವಕೀಲರು, ವೈದ್ಯರು ಹಾಗೂ ಕೇಂದ್ರ ಸರ್ಕಾರದ ಫಲಾನುಭವಿಗಳು ಪ್ರಚಾರ ನಡೆಸಲಿದ್ದಾರೆ. ಇದೊಂದು ಹೊಸ ಪ್ರಚಾರ ತಂತ್ರವಾಗಿದೆ ಎಂದು ಬಿಜೆಪಿ ಹೇಳಿಕೊಂಡಿದ್ದರೂ, ಇದು ಬಹುಜನ ಸಮಾಜ ಪಾರ್ಟಿ(BSP)ಯ ಚುನಾವಣಾ ಪ್ರಚಾರದ ಮಾದರಿಯಾಗಿದೆ. ಬಿಎಸ್ ಪಿ ಸಂಸ್ಥಾಪಕರಾದ ಕಾನ್ಶೀರಾಮ್ ಅವರು, ಹಳ್ಳಿಗಳಲ್ಲಿ ನೂರಾರು ಜನರನ್ನು ಸೇರಿಸಿ ಪ್ರಚಾರ ನಡೆಸುತ್ತಿದ್ದರು. ನೇರವಾಗಿ ಜನರನ್ನು ತಲುಪಿ ಮತದಾರರೊಂದಿಗೆ ಸಂಪರ್ಕ ಸಾಧಿಸುತ್ತಿದ್ದರು. ಹೀಗಾಗಿ ಅವರು ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಬಿಎಸ್ ಪಿಯನ್ನು ಅಧಿಕಾರಕ್ಕೆ ತಂದಿದ್ದರು.
ಕಾನ್ಶೀರಾಮ್ ಅವರ ಹಲವು ಬಗೆಯ ಚುನಾವಣಾ ತಂತ್ರಗಾರಿಕೆಯನ್ನು ಈಗಾಗಲೇ ಕಾಂಗ್ರೆಸ್, ಬಿಜೆಪಿ ಹಾಗೂ ಇನ್ನಿತರ ಸ್ಥಳೀಯ ಪಕ್ಷಗಳು ಬಳಸಿ ಯಶಸ್ವಿಯಾಗಿದೆ. ಆದ್ರೆ, ಬಿಎಸ್ ಪಿಯ ಈಗಿನ ನಾಯಕರು ತಂತ್ರಗಾರಿಕೆಗಳನ್ನು ಮರೆತು ಬಿಟ್ಟಿದೆ. ಹೀಗಾಗಿ ಪಕ್ಷ ಅವನತಿಯತ್ತ ಸಾಗಿದೆ ಎನ್ನುವ ಮಾತುಗಳು ಕೂಡ ಆಗಾಗ ಕೇಳಿ ಬರುತ್ತಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth