ʼನಾಲಿಗೆʼಯಿಂದಾಗಿ ಟಿಕೆಟ್‌ ಕಳೆದುಕೊಂಡರೇ ಅನಂತ್‌ ಕುಮಾರ್‌ ಹೆಗಡೆ! - Mahanayaka

ʼನಾಲಿಗೆʼಯಿಂದಾಗಿ ಟಿಕೆಟ್‌ ಕಳೆದುಕೊಂಡರೇ ಅನಂತ್‌ ಕುಮಾರ್‌ ಹೆಗಡೆ!

ananth kumar hegde
25/03/2024

ಉತ್ತರ ಕನ್ನಡ:  ಹಾಲಿ ಸಂಸದ ಅನಂತ್‌ ಕುಮಾರ್‌ ಹೆಗಡೆ ಈ ಬಾರಿ ಬಿಜೆಪಿ ಟಿಕೆಟ್‌ ಕಳೆದುಕೊಂಡಿದ್ದಾರೆ. ಟಿಕೆಟ್‌ ಸಿಕ್ಕೇ ಸಿಗುತ್ತೆ ಅನ್ನೋ ಭರವಸೆಯಲ್ಲಿದ್ದ ಅನಂತ್‌ ಕುಮಾರ್‌ ಹೆಗಡೆಗೆ ಇದೀಗ ಭಾರೀ ನಿರಾಸೆ ಎದುರಾಗಿದೆ.

ಕ್ಷೇತ್ರದಲ್ಲಿ ಕೆಲಸವೇ ಮಾಡದೇ ಕೇವಲ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ಸಂವಿಧಾನದ ಬಗ್ಗೆ ನಾಲಿಗೆ ಹರಿಯಬಿಡುತ್ತಾ ಪ್ರತಿಬಾರಿಯೂ ಟಿಕೆಟ್‌ ಗಿಟ್ಟಿಸಿಕೊಳ್ಳುತ್ತಿದ್ದ ಅನಂತ್‌ ಕುಮಾರ್‌ ಹೆಗಡೆಗೆ ಈ ಬಾರಿ ನಾಲಿಗೆಯೇ ಮುಳುವಾಗಿದೆ.

ಅನಂತ್‌ ಕುಮಾರ್‌ ಹೆಗಡೆ ಈ ಹಿಂದೆ ನಾವು ಸಂವಿಧಾನವನ್ನು ಬದಲು ಮಾಡಲೆಂದೇ ಬಂದಿರೋದು ಎಂಬ  ಹೇಳಿಕೆ ನೀಡಿದ್ದರು. ಈ ಹೇಳಿಕೆ ಕಳೆದ ಕರ್ನಾಟಕ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಲಾಭ ತಂದುಕೊಟ್ಟಿತ್ತು. ಈ ವಿಚಾರವನ್ನೇ ಜನರ ಮುಂದಿಟ್ಟ ಕಾಂಗ್ರೆಸ್‌ ನಾಯಕರು ಅತೀ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದರು.

ಬರೋಬ್ಬರಿ 6 ಅವಧಿಗೆ ಅಂದ್ರೆ, 30 ವರ್ಷಗಳ ಕಾಲ ಅನಂತ್‌ ಕುಮಾರ್‌ ಹೆಗಡೆ ಉತ್ತರ ಕನ್ನಡ ಸಂಸದರಾಗಿ ಲೋಕಸಭೆ ಪ್ರತಿನಿಧಿಸುತ್ತಿದ್ದರು. 7 ಬಾರಿ ಸ್ಪರ್ಧಿಸಿದ್ದ ಅವರು ಒಂದು ಬಾರಿ ಸೋತಿದ್ದರು. ಕೇವಲ ದ್ವೇಷ ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ಪ್ರತಿಬಾರಿ ಟಿಕೆಟ್‌ ಪಡೆಯುತ್ತಿದ್ದ ಅನಂತ್‌ ಕುಮಾರ್‌ ಹೆಗಡೆ, ತಾನು ಕ್ಷೇತ್ರದಲ್ಲಿ ಗೆಲ್ಲ ಬೇಕು ಎನ್ನುವ ಕಾರಣಕ್ಕೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದರು. ಅದು ಬೇರೆ ಕ್ಷೇತ್ರಗಳಲ್ಲಿ ಬಿಜೆಪಿಯ ಮತಗಳಿಗೆ ಹಿನ್ನಡೆ ಸೃಷ್ಟಿಸುತ್ತಿತ್ತು.

ಅತ್ತ ಉತ್ತರ ಕನ್ನಡ ಜನರು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಅಭಿಯಾನ ಆರಂಭಿಸಿದ್ದರೆ, ಹೆಗಡೆಯ ಅಡ್ರೆಸ್ಸೆ ಇರಲಿಲ್ಲ, ರಸ್ತೆ ಬೇಕು, ಮೂಲಭೂತ ಸೌಕರ್ಯ ಬೇಕು ಎಂದು ಜನರು ಕೇಳಿದರೆ ಅವೆಲ್ಲ ಸಂಸದರ ಕೆಲಸವೇ ಅಲ್ಲ ಎಂದು ಉಡಾಫೆಯ ಹೇಳಿಕೆಗಳನ್ನು ನೀಡಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಈ ಬಾರಿ ಅನಂತ್‌ ಕುಮಾರ್‌ ಹೆಗಡೆ ಸ್ಪರ್ಧಿಸಿದರೂ ಗೆಲ್ಲಲ್ಲ ಎನ್ನುವ ವರದಿಗಳು ಹೈಕಮಾಂಡ್ ಗೆ ತಲುಪುತ್ತಿದ್ದಂತೆಯೇ ಇದೀಗ ಟಿಕೆಟ್‌ ನಿರಾಕರಿಸಲಾಗಿದೆ.

ಚುನಾವಣೆ ಗೆಲ್ಲುವವರೆಗೆ ಮುಗ್ಧ ಜನರನ್ನು ಸಂವಿಧಾನದ ವಿರುದ್ಧ ಎತ್ತಿಕಟ್ಟುವುದು, ಗೆದ್ದ ಬಳಿಕ ಜನರ ಕಷ್ಟಕ್ಕೆ ಸ್ಪಂದಿಸದೇ ಇರುವುದು, ಕೇವಲ ವಿವಾದಾತ್ಮಕ ಹೇಳಿಕೆಗಳಿಂದಲೇ 6 ಬಾರಿ ಗೆದ್ದ ಅನಂತ್‌ ಕುಮಾರ್‌ ಹೆಗಡೆ, ಈ ಬಾರಿ ಕೂಡ 400 ಸ್ಥಾನಗಳನ್ನು ಬಿಜೆಪಿ ಗೆದ್ದರೆ, ಸಂವಿಧಾನಕ್ಕೆ ತಿದ್ದುಪಡಿ ತರುತ್ತೇವೆ ಎಂದು ನಾಲಿಗೆ ಹರಿಯಬಿಟ್ಟಿದ್ದರು. ಈ ಹೇಳಿಕೆ ಇಡೀ ದೇಶದಲ್ಲಿ ಬಿಜೆಪಿಗೆ ಭಾರೀ ಹಾನಿಯನ್ನುಂಟು ಮಾಡಿದೆ. ಕಾಂಗ್ರೆಸ್‌ ನಾಯಕರು ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಜನರನ್ನು ತಲುಪುತ್ತಿದ್ದಾರೆ. ಇದೀಗ ತನ್ನ ನಾಲಿಗೆಯಿಂದಲೇ ಅನಂತ್‌ ಕುಮಾರ್‌ ಹೆಗಡೆ ಟಿಕೆಟ್‌ ಕಳೆದುಕೊಂಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ