ಈ ಒಂದೇ ಕುಟುಂಬದಲ್ಲಿದ್ದಾರೆ 350 ಮತದಾರರು: ಈ ಕುಟುಂಬದ ಜನಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಿ!

ಸೊಂಟಿಪುರ (ಅಸ್ಸಾಂ): ಲೋಕಸಭಾ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ಚುನಾವಣಾ ಹಲವು ವಿಶೇಷಗಳು ಗಮನ ಸೆಳೆದಿವೆ. ಈ ಪೈಕಿ ದಿವಂಗತ ರೋಣ್ ಬಹದೂರ್ ಥಾಪಾ ಅವರ ಕೂಡುಕುಟುಂಬ ಕೂಡ ಭಾರೀ ಸದ್ದು ಮಾಡುತ್ತಿದ್ದು, ಇವರ ಕುಟುಂಬ ಬಹುದೊಡ್ಡ ಮತದಾರರ ಕುಟುಂಬವಾಗಿದೆ.
ರೋಣ್ ಬಹದೂರ್ ಥಾಪಾ ಕುಟುಂಬ ಅಸ್ಸಾಂನ ಸೊಂಟಿಪುರ ಜಿಲ್ಲೆಯ ಫುಲೋಗುರಿ ನೇಪಾಳಿ ಪಾಮ್ ನಲ್ಲಿದ್ದು, 350 ಮತದಾರರು ಒಂದೇ ಕುಟುಂಬದಲ್ಲಿದ್ದಾರೆ. ರಂಗಪಾರಾ ವಿಧಾನಸಭಾ ಕ್ಷೇತ್ರ ಮತ್ತು ಸೊಂಟಿಪುರ ಸಂಸತ್ ಕ್ಷೇತ್ರದಲ್ಲಿ ಈ ಕುಟುಂಬವಿದೆ. ಏಪ್ರಿಲ್ 19ರಂದು ಸೊಂಟಿಪುರ ಲೋಕಸಭಾ ಪ್ರತಿನಿಧಿಯನ್ನು ಆಯ್ಕೆ ಮಾಡಲು ಇವರು ಮತ ಚಲಾಯಿಸಲಿದ್ದಾರೆ.
ರೋಣ್ ಬಹಾದೂರ್ ಥಾಪಾಗೆ 5 ಪತ್ನಿಯರು:
ದಿವಂಗತ ರೋಣ್ ಬಹಾದೂರ್ ಥಾಪಾಗೆ 5 ಪತ್ನಿಯರಿದ್ದರು. ಈ ದಾಂಪತ್ಯದಲ್ಲಿ ಅವರಿಗೆ 12 ಪುತ್ರರು ಮತ್ತು 9 ಪುತ್ರಿಯರು. ಮೊಮ್ಮಕ್ಕಳ ಸಂಖ್ಯೆ 150ಕ್ಕೂ ಹೆಚ್ಚು. ಈ ಕುಟುಂಬ ಬೆಳೆದು ಈಗ ಈ ಕೂಡು ಕುಟುಂಬದಲ್ಲಿ ಒಟ್ಟು 1200 ಸದಸ್ಯರಿದ್ದು, ಈ ಪೈಕಿ 350ರಷ್ಟು ಸದಸ್ಯರು ಈ ಬಾರಿ ಮತಚಲಾಯಿಸಲಿದ್ದಾರೆ.
ನೇಪಾಳಿ ಪಾಮ್ ಗ್ರಾಮದ ಮುಖ್ಯಸ್ಥ ಮತ್ತು ದಿವಂಗತ ರೋಣ್ ಬಹದ್ದೂರ್ ಅವರ ಪುತ್ರ ತಿಲ್ ಬಹದೂರ್ ಥಾಪಾ, ಇಡೀ ಕುಟುಂಬದಲ್ಲಿ ಸುಮಾರು 350 ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ತಿಳಿಸಿದ್ದಾರೆ.
“ನನ್ನ ತಂದೆ ಅವರ ತಂದೆಯೊಂದಿಗೆ 1964 ರಲ್ಲಿ ಇಲ್ಲಿಗೆ ಬಂದು ನೆಲೆಸಿದರು. ನನ್ನ ತಂದೆಗೆ ಐದು ಹೆಂಡತಿಯರಿದ್ದರು. ನಾವು 12 ಸಹೋದರರು ಮತ್ತು 9 ಸಹೋದರಿಯರು. ತಂದೆಗೆ ಅವರ ಪುತ್ರರಿಂದ 56 ಮೊಮ್ಮಕ್ಕಳನ್ನು ಹೊಂದಿದ್ದರು. ಪುತ್ರಿಯರ ಕಡೆಯಿಂದ ಮೊಮ್ಮಕ್ಕಳ ಸಂಖ್ಯೆ ಗೊತ್ತಿಲ್ಲ. ಈ ಚುನಾವಣೆಯಲ್ಲಿ ನೇಪಾಳಿ ಪಾಮ್ ನಲ್ಲಿ ಥಾಪಾ ಕುಟುಂಬದ ಸುಮಾರು 350 ಸದಸ್ಯರು ಮತ ಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದಾರೆ. ನಾವು ಎಲ್ಲಾ ಮಕ್ಕಳನ್ನು ಲೆಕ್ಕ ಹಾಕಿದರೆ, ನಮ್ಮ ಕುಟುಂಬದ ಒಟ್ಟು ಸದಸ್ಯರು 1,200 ಕ್ಕಿಂತ ಹೆಚ್ಚಿದ್ದಾರೆ” ಎಂದು ತಿಲ್ ಬಹದ್ದೂರ್ ಥಾಪಾ ತಿಳಿಸಿದ್ದಾರೆ.
ಸರ್ಕಾರಿ ಕೆಲಸ ಸಿಗಲಿಲ್ಲ:
“ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದರು. ಆದರೆ ಅವರಿಗೆ ಯಾವುದೇ ಸರ್ಕಾರಿ ಕೆಲಸ ಸಿಗಲಿಲ್ಲ. ನಮ್ಮ ಕುಟುಂಬದ ಕೆಲವರು ಬೆಂಗಳೂರಿಗೆ ಹೋಗಿ ಖಾಸಗಿ ಉದ್ಯೋಗ ಕಂಡುಕೊಂಡರು. ಕೆಲವರು ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ನಾನು 1989 ರಿಂದ ಗ್ರಾಮ ಪ್ರಧಾನನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ 8 ಗಂಡು ಮತ್ತು 3 ಹೆಣ್ಣು ಮಕ್ಕಳಿದ್ದಾರೆ” ಎಂದು ತಿಲ್ ಬಹದ್ದೂರ್ ಹೇಳಿದರು.
ಹೆಚ್ಚು ಮತದಾರರು ಇರುವ ದೊಡ್ಡ ಕುಟುಂಬ ನಮ್ಮದು. ಅಪ್ಪ ರೋಣ್ ಬಹದೂರ್ ಥಾಪಾ 1997ರಲ್ಲಿ ಮೃತಪಟ್ಟರು. ನನಗೆ ಈಗ 64 ವರ್ಷ. ಮೂವರು ಪತ್ನಿಯರು 12 ಮಕ್ಕಳಿದ್ದಾರೆ ಎಂದು ರೋಣ್ ಬಹದೂರ್ ಥಾಪಾ ಅವರ ಇನ್ನೊಬ್ಬ ಪುತ್ರ ಸರ್ಕಿ ಬಹದೂರ್ ಥಾಪಾ ಹೇಳಿದ್ದಾರೆ.
ಸೊಂಟಿಪುರ ಲೋಕಸಭಾ ಕ್ಷೇತ್ರದಲ್ಲಿ 16.25 ಲಕ್ಷ ಮತದಾರರು ಇದ್ದಾರೆ. ಈ ಕ್ಷೇತ್ರದಲ್ಲಿ 9 ವಿಧಾನಸಭಾ ಕ್ಷೇತ್ರಗಳಿವೆ. ಅಸ್ಸಾಂನ 14 ಲೋಕಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಅಂದರೆ ಏಪ್ರಿಲ್ 19, ಏಪ್ರಿಲ್ 26, ಮೇ 7 ರಂದು ಮತದಾನ ನಡೆಯಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth