ಜಲಮಂಡಳಿ ತೋಡಿದ್ದ ಗುಂಡಿಗೆ ದ್ವಿಚಕ್ರ ವಾಹನ ಬಿದ್ದು ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ - Mahanayaka

ಜಲಮಂಡಳಿ ತೋಡಿದ್ದ ಗುಂಡಿಗೆ ದ್ವಿಚಕ್ರ ವಾಹನ ಬಿದ್ದು ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

bangalore
16/04/2024


Provided by

ಬೆಂಗಳೂರು: ಕೊಮ್ಮಘಟ್ಟ ಸಮೀಪದ ಎಸ್‌ ಎಂಬಿ ಲೇಔಟ್ 100 ಅಡಿ ರಸ್ತೆಯಲ್ಲಿ ಜಲಮಂಡಳಿ ತೋಡಿದ್ದ ಗುಂಡಿಗೆ ದ್ವಿಚಕ್ರ ವಾಹನ ಬಿದ್ದು ಅದರಲ್ಲಿ ಮೂವರ ಪೈಕಿ ಒಬ್ಬ ಮೃತಪಟ್ಟ ಘಟನೆ ನಡೆದಿದೆ.

ಇದರ ಬೆನ್ನಿಗೆ, ಜಲಮಂಡಳಿಯ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ಪ್ರಸಾತ್‌ ಮನೋಹರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊಮ್ಮಘಟ್ಟ ಸಮೀಪದ ಎಸ್‌ ಎಂಬಿ ಲೇಔಟ್ ನ 100 ಅಡಿ ರಸ್ತೆಯಲ್ಲಿ ವಾಲ್‌ ಚೇಂಬರ್‌ ಅಳವಡಿಸಲು ಗುಂಡಿ ತೋಡಲಾಗಿತ್ತು. ಈ ಗುಂಡಿಗೆ ಯುವಕನೊಬ್ಬ ಬಿದ್ದು ಸಾವನ್ನಪ್ಪಿದ್ದಾನೆ.

ಇನ್ನೂ ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾದ್,  ಈ ಘಟನೆ ನಡೆದಿರುವುದು ಬಹಳ ದುರದೃಷ್ಟಕರ ಸಂಗತಿ. ಕಾಮಗಾರಿ ವೇಳೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪೊಲೀಸ್‌ ಠಾಣೆಯಲ್ಲಿ ಈ ಕುರಿತು ದೂರು ಸಲ್ಲಿಕೆಯಾಗಿದ್ದು, ತನಿಖೆ ನಡೆಯುತ್ತಿದೆ. ಅಂತಿಮ ವರದಿಯಲ್ಲಿ ಯಾವುದಾದರೂ ಲೋಪದೋಷ ಕಂಡಬಂದಲ್ಲಿ ಸಂಬಂಧಪಟ್ಟವರ ಮೇಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಲಮಂಡಳಿ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ಘಟನೆ?

ಕೊಮ್ಮಘಟ್ಟ ಬಳಿಯ ಎಸ್‌ ಎಂಬಿ ಲೇಔಟ್ 100 ಅಡಿ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ ತೋಡಲಾಗಿದ್ದ ಗುಂಡಿಯಲ್ಲಿ ಗುಂಡಿಯಲ್ಲಿ ಬಿದ್ದು 20 ವರ್ಷದ ಸದ್ದಾಂ ಪಾಷಾ ಎಂಬಾತ ಮೃತಪಟ್ಟಿದ್ದಾನೆ. ಈತನ ಸ್ನೇಹಿತರಾದ ಉಮ್ರಜ್ ಪಾಷಾ ಮತ್ತು ಮುಬಾರಕ್ ಪಾಷಾ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಮೃತ ಯುವಕನ ಕುಟುಂಬದವರು ಆರೋಪಿಸಿದ್ದಾರೆ. ಜಲಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಎಫ್‌ ಐಆರ್ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ. ಜೀವನ್‌ ಭಿಮಾನಗರದ ನಿವಾಸಿಗಳಾದ ಸದ್ದಾಂ, ಉಮ್ರಜ್ ಹಾಗೂ ಮುಬಾರಕ್ ಅವರು ಕೊಮ್ಮಘಟ್ಟದಲ್ಲಿರುವ ಗುಜರಿ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ ರಸ್ತೆಯಲ್ಲಿ ಕುಡಿಯುವ ನೀರು ಪೂರೈಕೆ ಪೈಪ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಗುಂಡಿಯನ್ನು ತೋಡಿದ್ದು ಸುತ್ತಲೂ ವಾಹನಗಳು ಸಂಚರಿಸದಂತೆ ಬ್ಯಾರಿಕೇಡ್‌ ಗಳನ್ನು ನಿಲ್ಲಿಸಲಾಗಿದೆ. ಬ್ಯಾರಿಕೇಡ್‌ ಗಳ ನಡುವೆ ದ್ವಿಚಕ್ರ ವಾಹನಗಳು ತೆರಳು ವಷ್ಟು ಮಾತ್ರ ಜಾಗವಿದೆ. ಕೆಲವು ಸವಾರರು ನಿಧಾನವಾಗಿ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ.

ವ್ಹೀಲಿಂಗ್ ಮಾಡಲು ಹೋಗಿ ಗುಂಡಿ ಬಿದ್ದರು:

ಈ ಮೂವರು ಅತೀ ವೇಗವಾಗಿ ಬೈಕ್ ನಲ್ಲಿ ಸಾಗುತ್ತಿದ್ದರು. ಕಿರಿದಾದ ಜಾಗದಲ್ಲಿ ಹೋಗುವಾಗ ಬೈಕ್ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ ಗೆ ಡಿಕ್ಕಿ ಹೊಡೆದಿದೆ. ಬಳಿಕ ಮೂವರು ವಾಹನ ಸಮೇತ ಗುಂಡಿಯೊಳಗೆ ಬಿದ್ದಿದ್ದರು. ಸ್ಥಳೀಯರು ಹೋಗುವಷ್ಟರಲ್ಲೇ ಸದ್ದಾಂ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಯುವಕರು ವ್ಹೀಲಿಂಗ್ ಮಾಡಿಕೊಂಡು ವೇಗವಾಗಿ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ವ್ಹೀಲಿಂಗ್ ಮಾಡುವ ಉತ್ಸಾಹದಲ್ಲಿ ಗುಂಡಿಯನ್ನು ಗಮನಿಸದ ಕಾರಣ ಈ ಅವಘಡ ಸಂಭವಿಸಿದೆ. ಸ್ಥಳೀಯರು ಯುವಕರನ್ನು ಗುಂಡಿಯಿಂದ ಮೇಲಕ್ಕೆ ತಂದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಓರ್ವ ಮೃತಪಟ್ಟಿದ್ದಾನೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಯುವಕರು ವ್ಹೀಲಿಂಗ್ ಮಾಡಲು ಹೋಗಿ ಗುಂಡಿಗೆ ಬಿದ್ದ ಅಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ