ದಲಿತೇತರರು ಶೇ.75ರಷ್ಟು ಮೀಸಲಾತಿ  ಪಡೆದುಕೊಳ್ಳುತ್ತಿದ್ದಾರೆ: ಗಣನಾಥ ಶೆಟ್ಟಿ ಎಕ್ಕಾರು - Mahanayaka

ದಲಿತೇತರರು ಶೇ.75ರಷ್ಟು ಮೀಸಲಾತಿ  ಪಡೆದುಕೊಳ್ಳುತ್ತಿದ್ದಾರೆ: ಗಣನಾಥ ಶೆಟ್ಟಿ ಎಕ್ಕಾರು

ambedkar jayanti
17/04/2024


Provided by

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ )ಪ್ರೊ. ಬಿ. ಕೃಷ್ಣಪ್ಪ –ಎಕ್ಕಾರು ಗ್ರಾಮಶಾಖೆ ವತಿಯಿಂದ “ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ. ಆರ್. ಅಂಬೇಡ್ಕರ್ ರವರ 133ನೇ ಜನ್ಮ ದಿನಾಚರಣಾ ಕಾರ್ಯಕ್ರಮವನ್ನು ದಿನಾಂಕ 14–04–2024 ರವಿವಾರ ಎಕ್ಕಾರು ಗ್ರಾಮಪಂಚಾಯತ್ ಮೈದಾನದಲ್ಲಿ ಸಭಾ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಜಾನಪದ ಹಾಗೂ ಸಾಹಿತ್ಯ ವಿದ್ವಾಂಸರಾದ ಗಣನಾಥ ಶೆಟ್ಟಿ ಎಕ್ಕಾರು ಡಾ.ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಅಂಬೇಡ್ಕರ್ ರವರು ಇಡೀ ವಿಶ್ವವೇ ಒಪ್ಪುವ ಮಹಾ ಮಾನವತಾವಾದಿ. ಅಂಬೇಡ್ಕರ್ ರಂತಹ ಮೇಧಾವಿ ನಮ್ಮ ಭಾರತದಲ್ಲಿ ಹುಟ್ಟಿರುವುದೇ ನಮ್ಮೆಲ್ಲರಿಗೆ ಹೆಮ್ಮೆ. ವಿದ್ಯಾರ್ಥಿಗಳು ಅಂಬೇಡ್ಕರ್ ರವರ ಜೀವನವನ್ನು ಓದಿ ಅವರನ್ನು ಅರ್ಥಮಾಡಿಕೊಂಡರೆ ಖಂಡಿತವಾಗಿಯೂ ಭವಿಷ್ಯದ ಭಾರತದಲ್ಲಿ ಇನ್ನಷ್ಟು ಸಾಧಕರು ಹಾಗೂ ವಿಶ್ವನಾಯಕರು ಭಾರತದಿಂದಲೇ ಉದಯವಾಗಲು ಸಾಧ್ಯ. ನನ್ನಂತಹ ಹಳ್ಳಿಯ ಮಧ್ಯಮ ವರ್ಗದ ವಿದ್ಯಾರ್ಥಿಯೂ ಉನ್ನತ ವಿದ್ಯಾಭ್ಯಾಸವನ್ನು ಪಡೆದು ಉತ್ತಮ ಸಾಧನೆ ಮಾಡಲು ಅಂಬೇಡ್ಕರ್ ರವರೇ ಸ್ಫೂರ್ತಿ ಎಂದರು.

ಅಂಬೇಡ್ಕರ್ ರವರು ಎಲ್ಲಾ ಸಮುದಾಯಗಳಿಗೂ ಅವರವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಮೀಸಲಾತಿ ಎಂದರೆ ಅದು ಕೇವಲ ದಲಿತರಿಗೆ ಮಾತ್ರ ಎನ್ನುವ ತಪ್ಪು ಕಲ್ಪನೆ ನಮ್ಮ ಸಮಾಜದಲ್ಲಿದೆ. ವಾಸ್ತವವಾಗಿ ಪ.ಜಾತಿ/ಪಂಗಡಗಳಿಗೆ ಕೇವಲ 18ರಿಂದ 25 ಶೇಕಡ ಮಾತ್ರ ಮೀಸಲಾತಿ ಇದೆ. ಇನ್ನುಳಿದ 75 ಶೇಕಡ ಮೀಸಲಾತಿಯನ್ನು ಹಿಂದುಳಿದ ವರ್ಗ, ಸಾಮಾನ್ಯ ವರ್ಗ, ಧಾರ್ಮಿಕ ಅಲ್ಪಸಂಖ್ಯಾತರು ಪಡೆದುಕೊಳ್ಳುತ್ತಿದ್ದಾರೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.

ambedkar jayanti

ಅಂಬೇಡ್ಕರ್ ರವರು ಮಹಿಳಾ ಸಮಾನತೆ ಹಾಗೂ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸಿದ್ದರು. ಅವರು ಕಾನೂನು ಹಾಗೂ ಕಾರ್ಮಿಕ ಸಚಿವರಾಗಿದ್ದಾಗ ಹಿಂದೂ ಕೋಡ್ ಬಿಲ್ ನ್ನು ತಂದು ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು, ಶಿಕ್ಷಣದ ಹಕ್ಕು, ವಿವಾಹ ವಿಚ್ಚೇದನಾ ಹಕ್ಕು, ಮಹಿಳಾ ನೌಕರರಿಗೆ ಹೆರಿಗೆ ರಜೆ, ಮಹಿಳಾ ಮೀಸಲಾತಿಯನ್ನು ಬಲವಾಗಿ ಪ್ರತಿಪಾದಿಸಿದ್ದರು. ದುರಂತವೆಂದರೆ ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಇಂದಿಗೂ ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಅವಕಾಶ ಸಿಗದೆ ಅಂಬೇಡ್ಕರ್ ರವರ ಮಹಿಳಾ ಸಮಾನತೆಯ ಕನಸು ಇಂದಿಗೂ ನನಸಾಗಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ. ಸಂ. ಸ. ಗ್ರಾಮ ಸಂಚಾಲಕರಾದ ಪರಮೇಶ್ವರ್ ಎಕ್ಕಾರು ವಹಿಸಿದ್ದರು. ವೇದಿಕೆಯಲ್ಲಿ  ದ. ಸಂ. ಸ. ಜಿಲ್ಲಾ ಸಂಚಾಲಕರಾದ ರಘು ಕೆ. ಎಕ್ಕಾರು, ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಮೋನಪ್ಪ ಶೆಟ್ಟಿ, ಕುಂಭಕಂಟಿಣಿ ದೈವಸ್ಥಾನ ಎಕ್ಕಾರು ಇದರ ಆಡಳಿತ ಮೊಕ್ತೇಸರರಾದ ನಿತಿನ್ ಹೆಗ್ಡೆ, ದ. ಸಂ. ಸ. ತಾಲೂಕು ಸಂಚಾಲಕರಾದ ಪುರಂದರ ಕೆರೆಕಾಡ್, ಲಯನ್ಸ್ ಕ್ಲಬ್ ಕಟೀಲು -ಎಕ್ಕಾರು ಇದರ ಅಧ್ಯಕ್ಷರಾದ ಶೇಖರ ಶೆಟ್ಟಿ, P.W.D. ಗುತ್ತಿಗೆದಾರ ವಿ. ಕಣ್ಣನ್, ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ಕೆಂಚಗುಡ್ಡೆ ಅಧ್ಯಕ್ಷರಾದ ಗಣೇಶ್ ಕೆಂಚಗುಡ್ಡೆ, ದ. ಸಂ. ಸ. ಗ್ರಾಮ ಮಹಿಳಾ ಸಂಚಾಲಕಿ ಸೌಮ್ಯ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವ ದಿನ ರಾಷ್ಟ್ರಪತಿಗಳಿಂದ ರಾಷ್ಟ್ರಪತಿ ಚಿನ್ನದ ಪದಕ ಪಡೆದ ಬಜ್ಪೆ ಪೊಲೀಸು ಠಾಣೆಯ ಸಹಾಯಕ ಪೊಲೀಸು ಉಪ ನಿರೀಕ್ಷಕರಾದ ರಾಮ. ಬಿ. ಪೂಜಾರಿ, ಸಹಕಾರಿ ಕ್ಷೇತ್ರದಲ್ಲಿ “ಸಹಕಾರಿ ರತ್ನ” ಪ್ರಶಸ್ತಿ ಪಡೆದ ಮೋನಪ್ಪ ಶೆಟ್ಟಿ ಎಕ್ಕಾರು, ನಿವೃತ್ತ ಮಹಿಳಾ ಆರೋಗ್ಯ ಸಹಾಯಕಿ ಜೂಲಿಯಾನ ಡಿ’ಸೋಜ ಹಾಗೂ ಎಕ್ಕಾರು ಸೇರಿದಂತೆ 8 ರುಧ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಕಾರ್ಯ ನಿರ್ವಹಿಸುತ್ತಿರುವ ಮಾಧವ ಎಂ. ಕೆರೆಕಾಡು ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಅಂಗನವಾಡಿ ಪುಟಾಣಿಗಳು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕೃಷ್ಣ. ಕೆ. ಕಾರ್ಯಕ್ರಮ ನಿರ್ವಹಿಸಿ ವಾಸು ಎಕ್ಕಾರು ಧನ್ಯವಾದ ಸಮರ್ಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ