‘ಕರಡಿ’ ಎಂಬ ಹೆಸರಿನ ಪುಂಡಾನೆಯನ್ನು ಯಶಸ್ವಿಯಾಗಿ ಸೆರೆ ಹಿಡಿದ ಅಭಿಮಾನ್ಯು ನೇತೃತ್ವದ ಗಜಪಡೆ
ಹಾಸನ: ಕೂಲಿ ಕಾರ್ಮಿಕ ವಸಂತ ಎಂಬವರನ್ನು ಬಲಿ ಪಡೆದು, ಸಾಕಷ್ಟು ಜನರ ಮೇಲೆ ದಾಳಿ ಮಾಡಿದ್ದ ‘ಕರಡಿ’ ಎಂಬ ಹೆಸರಿನ ಕಾಡಾನೆಯನ್ನು ಕ್ಯಾಪ್ಟನ್ ಅಭಿಮಾನ್ಯು ಆನೆಯ ನೇತೃತ್ವದಲ್ಲಿ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಬೇಲೂರು ತಾಲ್ಲೂಕಿನ ವಾಟೇಹಳ್ಳಿಯ ಐಬಿಸಿ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ತಂಡ ಕಾರ್ಯಾಚರಣೆ ನಡೆಸಿತು. ಕಾರ್ಯಾಚಣೆಯಲ್ಲಿ ಅಭಿಮನ್ಯು, ಪ್ರಶಾಂತ, ಸುಗ್ರೀವ, ಕರ್ನಾಟಕ ಭೀಮ, ಅಶ್ವತ್ಥಾಮ, ಮಹೇಂದ್ರ ಸೇರಿ ಎಂಟು ಆನೆಗಳು ಭಾಗಿಯಾಗಿದ್ದವು.
ಸದ್ಯ ಕರಡಿ ಆನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇತ್ತೀಚೆಗೆ ಕಲ್ಕುಂದ ಗ್ರಾಮದಲ್ಲಿ ಇಬ್ಬರ ಮೇಲೆ ದಾಳಿ ನಡೆಸಿದ್ದ ಕರಡಿ ಆನೆ, ಜನವರಿ 4ರಂದು ಬೇಲೂರು ತಾಲೂಕಿನ ಮತ್ತಾವರ ಗ್ರಾಮದ ವಸಂತ ಎಂಬ ಕೂಲಿ ಕಾರ್ಮಿಕನನ್ನು ಬಲಿ ಪಡೆದಿತ್ತು.
ಸಕಲೇಶಪುರ ಭಾಗದಲ್ಲಿ ಕಾಡಾನೆ ದಾಳಿ ಪ್ರಕರಣಗಳು ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತರಾಗಿ, ಕಾಡಾನೆಗಳ ಸ್ಥಳಾಂತರಕ್ಕೆ ಪಟ್ಟು ಹಿಡಿದಿದ್ದರು. ಇತ್ತೀಚೆಗಷ್ಟೇ ಕೂಲಿ ಕಾರ್ಮಿರೊಬ್ಬರನ್ನು ಕರಡಿ ಆನೆ ಅಟ್ಟಾಡಿಸಿತ್ತು. ಆದರೆ ಅವರು ಸ್ವಲ್ಪದರಲ್ಲೇ ಬಚಾವ್ ಆಗಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth




























