ದರ್ಶನ್ ವಿರುದ್ಧ ರೌಡಿಶೀಟರ್ ತೆರೆಯಲಾಗುತ್ತದೆಯೇ?: ಕಾನೂನು ಏನು ಹೇಳುತ್ತದೆ?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರ ಹೆಸರು ಮೇಲಿಂದ ಮೇಲೆ ಕ್ರಿಮಿನಲ್ ಕೃತ್ಯಗಳಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ದರ್ಶನ್ ಹೆಸರಿನಲ್ಲಿ ರೌಡಿಶೀಟರ್ ತೆರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ದರ್ಶನ್ ವಿರುದ್ಧ ರೌಡಿಶೀಟರ್ ತೆರೆಯಲು ಕಾನೂನಿನಲ್ಲಿ ಅವಕಾಶ ಇದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ದರ್ಶನ್ ವಿರುದ್ಧ ಇದೀಗ ಕೊಲೆ ಕೇಸ್ ನಂತಹ ಗಂಭೀರ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ ಅವರ ವಿರುದ್ಧ ರೌಡಿಶೀಟರ್ ತೆರೆಯಬೇಕು ಎನ್ನುವ ಒತ್ತಾಯಗಳು ಕೂಡ ಕೇಳಿ ಬಂದಿವೆ ಎನ್ನಲಾಗಿದೆ.
ದರ್ಶನ್ ವಿರುದ್ಧ ಹಿಂದೆಯೂ ಅನೇಕ ಬಾರಿ ಆರೋಪಗಳು ಕೇಳಿ ಬಂದಿವೆ. ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಲ್ಲಿ 28 ದಿನಗಳ ಕಾಲ ದರ್ಶನ್ ಜೈಲು ವಾಸ ಅನುಭವಿಸಿ ಬಂದಿದ್ದರು. ಸಿನಿಮಾ ನಿರ್ಮಾಪಕರೊಬ್ಬರಿಗೆ ಕರೆ ಮಾಡಿ ಅವಾಚ್ಯ ಪದಗಳಿಂದ ಧಮ್ಕಿ ಹಾಕಿರುವ ಆರೋಪಗಳೂ ಇವೆ. ಮೈಸೂರಿನ ಹೊಟೇಲ್ ಸಿಬ್ಬಂದಿಗೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪವೂ ಇದೆ. ನಿರ್ಮಾಪಕ ಉಮಾಪತಿ ಜೊತೆಗಿನ ಕಿರಿಕ್ ಕೂಡ ಇತ್ತೀಚೆಗೆ ಸುದ್ದಿಯಾಗಿತ್ತು. ಯಜಮಾನ ಸಿನಿಮಾ ಶೂಟಿಂಗ್ ವೇಳೆ ಜೂನಿಯರ್ ಕಲಾವಿದರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಕೂಡ ಇತ್ತು.
ಬಲಪ್ರಯೋಗದ ಮೂಲಕ ಬೆದರಿಕೆ ಹಾಕುವುದು, ಹಫ್ತಾ ವಸೂಲಿ ಮಾಡುವವರು, ಅಸಭ್ಯ ವರ್ತನೆ, ದೊಂಬಿಯಲ್ಲಿ ಭಾಗಿಯಾಗುವವರು, ದರೋಡೆ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ರೌಡಿ ಶೀಟರ್ ತೆರೆಯಲು ಕಾನೂನಿನಲ್ಲಿ ಅವಕಾಶ ಇದೆ.
ಗೃಹ ಸಚಿವ ಪರಮೇಶ್ವರ್ ಹೇಳಿಕೆ:
ದರ್ಶನ್ ಮೇಲೆ ರೌಡಿ ಶೀಟ್ ಓಪನ್ ಮಾಡೋ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿದ್ದಾರೆ. ದರ್ಶನ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿಗಳನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇದನ್ನು ಪೊಲೀಸರು ತನಿಖೆ ಮಾಡುತ್ತಾರೆ. ಪೊಲೀಸರೇ ಸಮರ್ಥರು ಅವರೇ ಫ್ರೀ ಹ್ಯಾಂಡ್ ಕೊಡಲಾಗಿದೆ. ನಮ್ಮನ್ನ ಕೇಳಿ ಸೆಕ್ಷನ್ ಹಾಕೋದಿಲ್ಲ. ತನಿಖೆ ಆದಮೇಲೆ ಏನ್ ಶಿಫಾರಸು ಮಾಡ್ತಾರೆ ನೋಡೋಣ ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97