ನೀರಿನ ಸಮಸ್ಯೆ, ಕಾಲೇಜಿನ ರಸ್ತೆ, ಉಪನ್ಯಾಸಕರ ಕೊರತೆ ಪರಿಹಾರಕ್ಕೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ - Mahanayaka
6:22 PM Saturday 18 - October 2025

ನೀರಿನ ಸಮಸ್ಯೆ, ಕಾಲೇಜಿನ ರಸ್ತೆ, ಉಪನ್ಯಾಸಕರ ಕೊರತೆ ಪರಿಹಾರಕ್ಕೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ

protest
07/08/2024

ಔರಾದ್: ಉಪನ್ಯಾಸಕರ ಕೊರತೆಯಿಂದ ನಮ್ಮ ಬದುಕು ಹಾಳಾಗುತ್ತಿದೆ. ಕಾಲೇಜಿನಲ್ಲಿ ಸಮರ್ಪಕ ಸೌಲಭ್ಯಗಳು ಇಲ್ಲದ ಕಾರಣ ಪಾಠ–ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ತರಗತಿ ಬಹಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.


Provided by

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರೊಂದಿಗೆ ಪಟ್ಟಣದ ಬಿಎಸೆನ್ನೆಲ್ ಕಚೇರಿಯ ಬಳಿಯಲ್ಲಿ ಔರಾದ್–ಬೀದರ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಕಾರ್ಯಕರ್ತರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಕಾಲೇಜಿನಲ್ಲಿ ಅನೇಕ ವರ್ಷಗಳಿಂದ ಉಪನ್ಯಾಸಕರ ಕೊರತೆ ಇದೆ. ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಕಾಲೇಜಿನಲ್ಲಿ ಸರಕಾರ ಒಬ್ಬರನ್ನು ಮಾತ್ರ ನೇಮಿಸಿದೆ. ಅವರಿಗೂ ಕುಡಾ ಸದ್ಯ ಪ್ರಾಂಶುಪಾಲರ ಹುದ್ದೆಯೂ ನಿರ್ವಹಿಸುತ್ತಿದ್ದಾರೆ. ಆದರೆ ಸರಕಾರ ಮಾತ್ರ ಕಾಲೇಜಿನಲ್ಲಿ ಉಪನ್ಯಾಸಕ ನೇಮಕ ಮಾಡಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಉಪನ್ಯಾಸಕರಿಲ್ಲದ ಕಾರಣ ಕಾಲೇಜಿನಲ್ಲಿರುವ ಕೆಲ ವಿದ್ಯಾರ್ಥಿಗಳು ಬೇರೆಡೆ ಪ್ರವೇಶ ಪಡೆದಿದ್ದಾರೆ. ಆದರೆ ನಾವುಗಳು ಬಡವರು ಬೇರೆಡೆ ಹೋಗಿ ವ್ಯಾಸಂಗ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿಯೇ ಪ್ರವೇಶ ಪಡೆದಿದ್ದೇವೆ. ಸರಕಾರ ಉಪನ್ಯಾಸಕರ ನೇಮಕ ಮಾಡುವ ಮೂಲಕ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ಕಾಲೇಜಿನ ಆವರಣದಲ್ಲಿಯೇ ಉಪವಾಸ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸರಕಾರ ಕೋಟ್ಯಾಂತರ ಹಣ ಖರ್ಚು ಮಾಡಿ ಕಾಲೇಜಿನ ಕಟ್ಟಡ ನಿರ್ಮಾಣ ಮಾಡಿದೆ. ಆದರೆ ಉಪನ್ಯಾಸಕರ ನೇಮಕ ಮಾಡಿಲ್ಲ. ಇನ್ನೂ ಕಾಲೇಜಿನ ಆವರಣದಲ್ಲಿಯೇ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಆದರೆ ಇನ್ನೂ ಆರಂಭವಾಗಿಲ್ಲ. ಕಟ್ಟಡದಲ್ಲಿ ಗಿಡಗಂಟಿ ಬೆಳೆದು ಹಾವುಗಳ ಕಾಟ ವಿಪರೀತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾರಿಗೆ ಬಸ್ ಗಳು ಕಾಲೇಜಿನ ಬಳಿಯಲ್ಲಿ ನಿಲ್ಲಿಸುವಂತೆ ಕೋರಿಕೆಯ ಮೇರೆಗೆ ನಿಲ್ಲುಗೆ ನಾಮಫಲಕ ಹಾಕಲಾಗಿದೆ. ಆದರೆ ಕೆಲ ಬಸ್‌ಗಳು ನಿಲ್ಲಿಸುತ್ತಿಲ್ಲ ಎಂದು ದೂರಿದರು. ಸ್ಥಳಕ್ಕೆ ಸಾರಿಗೆ ಘಟಕ ಅಧಿಕಾರಿಗಳು ಬಂದು ಇನ್ಮೊಂದಿದೆ ಬಸ್ ನಿಲ್ಲಿಸುವಂತೆ ಎಲ್ಲರಿಗೂ ಸೂಚನೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ ಅವರಿಗೆ ಸಲ್ಲಿಸಿದರು. ಪಿಎಸ್ ಐ ವಾಸೀಮ್ ಪಟೇಲ್, ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರ‍್ಯಾಕರೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ, ಅಶೋಕ ಶೆಂಬೆಳ್ಳಿ, ಸುರೇಶ ಮರ್ತುಳೆ, ಅನಿಲ ಮೇತ್ರೆ, ನಿತಿನ ಮೂಲಗೆ, ಪಲ್ಲವಿ, ಗೋಪಿ, ಆಶಾ, ಗೌತಮ, ಓಂಕಾರ ಸೇರಿದಂತೆ ಅನೇಕರಿದ್ದರು.

ನೀರಿನ ಸಮಸ್ಯೆ ಬಗೆಹರಿಸಿ:

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಹೆದ್ದಾರಿ ರಸ್ತೆ ನಿರ್ಮಾಣ ಮಾಡುವ ವೇಳೆ ಪೈಪ್‌ ಲೈನ್ ಹಾಳು ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಸಂಬಂಧಿಸಿದ ಹೆದ್ದಾರಿ ರಸ್ತೆಯ ಗುತ್ತಿಗೆದಾರರು ಪೈಪ್ ಲೈನ್ ಕಾಮಗಾರಿಯನ್ನು ಸರಿಪಡಿಸಿಲ್ಲ. ಇದರಿಂದ ನಿತ್ಯ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಕೂಡಲೇ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ರಸ್ತೆ ಸರಿಪಡಿಸಲು ಒತ್ತಾಯ:

ಔರಾದ್–ಬೀದರ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಮಾಡುವ ವೇಳೆ ಕಾಲೇಜಿನ ಕಡೆಗೆ ಹೋಗುವ ರಸ್ತೆ ಅಗೆದು ತಗ್ಗು ಮಾಡಲಾಗಿದೆ. ಇದರಿಂದ ವಾಹನಗಳು ಸಂಚರಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರಿನ ಪೈಪ್‌ಲೈನ್ ಮತ್ತು ರಸ್ತೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಸಮಸ್ಯೆ ಬಹೆಗರಿಯುತ್ತಿಲ್ಲ ಎಂದು ಪ್ರಾಂಶುಪಾಲ ಡಾ.ಸಂಜೀವಕುಮಾರ ಅಸಹಾಯಕತೆ ವ್ಯಕ್ತಪಡಿಸಿದರು.

ವರದಿ:  ರವಿಕುಮಾರ ಶಿಂದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ