ಆಗಸ್ಟ್ 14: ಹರ್ ಘರ್ ತಿರಂಗಾ ಅಭಿಯಾನ: ಔರಾದನಲ್ಲಿ ಬೈಕ್ ರ‍್ಯಾಲಿ

ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಕರೆ ನೀಡಿರುವಂತೆ ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ಬಿಜೆಪಿ ಔರಾದ(ಬಿ) ಮಂಡಲದ ವತಿಯಿಂದ ಆಗಸ್ಟ್ 14 ರಂದು ಔರಾದ ಪಟ್ಟಣದಲ್ಲಿ ಬೈಕ್ ರ‍್ಯಾಲಿ ಏರ್ಪಡಿಸಲಾಗಿದೆ.
ಔರಾದ(ಬಿ) ಕ್ಷೇತ್ರದ ಆರಾಧ್ಯದೈವ ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನದ ಹತ್ತಿರ ಬೆಳಗ್ಗೆ 10 ಗಂಟೆಗೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ರ‍್ಯಾಲಿಗೆ ಚಾಲನೆ ನೀಡುವರು. ರ‍್ಯಾಲಿಯು ಶ್ರೀ ಅಮರೇಶ್ವರ ದೇವಸ್ಥಾನದ ಬಳಿಯಿಂದ ಹೊರಟು, ಡಾ.ಚನ್ನಬಸವ ಪಟ್ಟದೇವರು ವೃತ್ತ, ಕನ್ನಡಾಂಬೆ ವೃತ್ತ, ಬಸವೇಶ್ವರ ವೃತ್ತ, ತಹಸೀಲ್ ಕಛೇರಿ, ಪತ್ರಿಸ್ವಾಮಿ ಕಾಲೇಜು, ಎಪಿಎಂಸಿ ವೃತ್ತದ ಮಾರ್ಗವಾಗಿ ಬಿಜೆಪಿ ಕಛೇರಿಗೆ ಸಾಗುವುದು.
ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ, ಜಿಲ್ಲಾ ಮುಖಂಡರಾದ ಈಶ್ವರಸಿಂಗ್ ಠಾಕೂರ, ಔರಾದ(ಬಿ) ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಸೇರಿದಂತೆ ಜಿಲ್ಲಾ ಮತ್ತು ಮಂಡಲ ಘಟಕಗಳ ಪದಾಧಿಕಾರಿಗಳು, ಮುಖಂಡರು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವರು.
ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಬೇಕು ಮತ್ತು ಜನರಲ್ಲಿ ದೇಶಾಭಿಮಾನ ಮೂಡಿಸಬೇಕೆಂಬ ಸದಾಶಯದೊಂದಿಗೆ ದೇಶದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರು ಆಗಸ್ಟ್ 13 ರಿಂದ 15ರ ವರೆಗೆ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ಪರಕೀಯರ ಆಳ್ವಿಕೆಯಲ್ಲಿದ್ದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಲಕ್ಷಾಂತರ ಹೋರಾಟಗಾರರು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ಈ ಬಗ್ಗೆ ಎಲ್ಲರಿಗೂ ತಿಳಿಯಬೇಕು. ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮ ಜಾಗೃತಗೊಳಿಸಬೇಕೆಂಬ ಉದ್ದೇಶದಿಂದ ನಡೆಯುತ್ತಿರುವ ಈ ಅಭಿಯಾನ ಯಶಸ್ವಿಯಾಗಿ ನಡೆಯಬೇಕು. ಅಭಿಯಾನದ ಅಂಗವಾಗಿ ತ್ರಿವರ್ಣ ಧ್ವಜ ಹಾರಿಸುವುದು, ರಾಷ್ಟ್ರಧ್ವಜದೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಒಳಗೊಂಡು ಅಭಿಯಾನದ ಎಲ್ಲ ಕಾರ್ಯಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಡೆಸಬೇಕು.
ಮಂಡಲ್ ಅಧ್ಯಕ್ಷರಾದಿಯಾಗಿ ಎಲ್ಲ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಬೂತ್ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಹುಮ್ಮಸ್ಸಿನಿಂದ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಎಲ್ಲ ಗ್ರಾಮಗಳ ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ರಾರಾಜಿಸಬೇಕು. ಈ ದಿಶೆಯಲ್ಲಿ ಔರಾದ(ಬಿ) ಪಟ್ಟಣದಲ್ಲಿ ಆ.14ರಂದು ಆಯೋಜಿಸಿರುವ ಬೈಕ್ ರ‍್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವರದಿ: ರವಿಕುಮಾರ ಶಿಂದೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97