ಪ್ರತಿಭಟನೆ ವೇಳೆ ಮಹಿಳಾ ಪೊಲೀಸ್ ಮೇಲೆ ಹಲ್ಲೆ: ಕೂದಲು ಎಳೆದ ದೃಶ್ಯ ಕ್ಯಾಮೆರಾದಲ್ಲಿ ಸೆರೆ - Mahanayaka

ಪ್ರತಿಭಟನೆ ವೇಳೆ ಮಹಿಳಾ ಪೊಲೀಸ್ ಮೇಲೆ ಹಲ್ಲೆ: ಕೂದಲು ಎಳೆದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

04/09/2024


Provided by

ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ‌ನಡೆದಿದೆ. ಈ ಘಟನೆಯ ವೀಡಿಯೊದಲ್ಲಿ ಆ ವ್ಯಕ್ತಿಯು ಮಹಿಳಾ ಪೊಲೀಸ್ ರ ಕೂದಲನ್ನು ಎಳೆಯುವುದನ್ನು ತೋರಿಸುತ್ತದೆ.

ವಿರುಧುನಗರದ ಅರುಪುಕೊಟ್ಟೈ ಪ್ರದೇಶದಲ್ಲಿ ‌ಈ ಘಟನೆ ನಡೆದಿದೆ. ಹಳೆ ದ್ವೇಷದಿಂದಾಗಿ ಕಾಳಿಕುಮಾರ್ ಎಂಬ ವ್ಯಕ್ತಿಯನ್ನು ಸೋಮವಾರ ಪುರುಷರ ಗುಂಪೊಂದು ಕೊಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಆತನ ಸ್ನೇಹಿತರು ಮತ್ತು ಕುಟುಂಬಸ್ಥರು ಸೇರಿದಂತೆ ಆತನ ಹಳ್ಳಿಯ ಕೆಲವು ಜನರು, ಕಾಳಿಕುಮಾರ್ ಅವರ ಶವವನ್ನು ಇರಿಸಲಾಗಿದ್ದ ಅರೂಪುಕ್ಕೋಟ್ಟೈನ ಸರ್ಕಾರಿ ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿ, ಆತನ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿದರು.

ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಲು ಪ್ರಯತ್ನಿಸಿದಾಗ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಗಾಯತ್ರಿ ಮತ್ತು ಇತರ ಪೊಲೀಸ್ ಸಿಬ್ಬಂದಿ ಅವರನ್ನು ಚದುರಿಸಲು ಪ್ರಯತ್ನಿಸಿದರು. ಇದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಘಟನಾ ಸ್ಥಳದ ವೀಡಿಯೊದಲ್ಲಿ ಪ್ರತಿಭಟನಾಕಾರರೊಬ್ಬರು ಡಿಎಸ್ಪಿ ಗಾಯತ್ರಿಯನ್ನು ತಳ್ಳುತ್ತಿರುವುದನ್ನು ತೋರಿಸುತ್ತದೆ. ಅಲ್ಲದೇ ಇನ್ನೊಬ್ಬ ವ್ಯಕ್ತಿ ಆಕೆಯ ಕೂದಲನ್ನು ಎಳೆಯುತ್ತಿರುವುದು ಕಂಡುಬರುತ್ತದೆ.
ಇತರ ಪೊಲೀಸರು ತಕ್ಷಣವೇ ಡಿಎಸ್ಪಿ ಗಾಯತ್ರಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ವೈರಲ್ ಆದ ವೀಡಿಯೊದ ಆಧಾರದ ಮೇಲೆ, ಡಿಎಸ್ಪಿಯ ಕೂದಲನ್ನು ಎಳೆಯುತ್ತಿದ್ದ ಬಾಲಮುರುಗನ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಪ್ರತಿಭಟನೆಗೆ ಸಂಬಂಧಿಸಿದಂತೆ ಇನ್ನೂ ನಾಲ್ವರನ್ನು ಬಂಧಿಸಲಾಗಿದೆ.
ಡಿಎಸ್ಪಿ ಗಾಯತ್ರಿ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯಾ ಟುಡೇ ಟಿವಿಗೆ ತಿಳಿಸಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿದ ಎಐಎಡಿಎಂಕೆ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ, “ಡಿಎಂಕೆ ಆಡಳಿತದಲ್ಲಿ ಕಾನೂನಿನ ಭಯವಿಲ್ಲದೆ ಯಾರ ಮೇಲೂ ದಾಳಿ ಮಾಡಬಹುದು. ರಾಜ್ಯದ ಜನರನ್ನು ರಕ್ಷಿಸಬೇಕಾದ ಪೊಲೀಸರಿಗೆ ಸಹ ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸಿದ್ದಕ್ಕಾಗಿ ಡಿಎಂಕೆ ಸರ್ಕಾರ ಮತ್ತು ಕೈಗೊಂಬೆ ಮುಖ್ಯಮಂತ್ರಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಡಿಎಸ್ಪಿ ಗಾಯತ್ರಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ